ಶಬರಿಮಲೆ ಯಾತ್ರಿಕರಿಗೆ ಸಹಕಾರ ನೀಡುವಂತೆ ಕೇರಳಕ್ಕೆ ಪತ್ರ : ಡಾ.ಶಾಲಿನಿ ರಜನೀಶ್

ಡಾ.ಶಾಲಿನಿ ರಜನೀಶ್
ಬೆಂಗಳೂರು : ಶಬರಿಮಲೆ ಯಾತ್ರೆ ಕೈಗೊಳ್ಳುವ ರಾಜ್ಯದ ಭಕ್ತಾಧಿಗಳಿಗೆ ಅಗತ್ಯ ಸೌಲಭ್ಯ ಹಾಗೂ ಸುರಕ್ಷತೆಯನ್ನು ನೀಡುವಂತೆ ಕೋರಿ ಕೇರಳ ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.
ಬುಧವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯದಿಂದ ಪ್ರತಿ ವರ್ಷ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಅಯ್ಯಪ್ಪಸ್ವಾಮಿ ದರ್ಶನಕ್ಕೆ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ. ಅದರಲ್ಲೂ ನವೆಂಬರ್ ನಿಂದ ಜನವರಿ ತಿಂಗಳಿನಲ್ಲಿ ಶಬರಿಮಲೆಗೆ ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರ ಸುಗಮ ಸೌಲಭ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಸರಕಾರದ ಅಗತ್ಯ ಸಹಕಾರವನ್ನು ನೀಡುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಬಳಸುವ ಪ್ರವೇಶ ಮಾರ್ಗ, ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವುದು. ಅಗತ್ಯ ವೈದ್ಯಕೀಯ ನೆರವು, ತುರ್ತು ಪ್ರತಿಕ್ರಿಯೆ ಸೇವೆಗಳು ಮತ್ತು ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯ ನಡೆಸುವುದು. ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಪೊಲೀಸ್ ಮತ್ತು ಸುರಕ್ಷತಾ ಕ್ರಮಗಳನ್ನು ವಿಶೇಷವಾಗಿ ಸೂಕ್ಷ್ಮ ಅಥವಾ ಹೆಚ್ಚಿನ ಸಾಂದ್ರತೆಯ ಸ್ಥಳಗಳಲ್ಲಿ ವ್ಯವಸ್ಥೆ ಮಾಡುವುದು.
ಯಾತ್ರಿಕರಿಗೆ ಸೌಲಭ್ಯಗಳು ಮತ್ತು ಕಾರ್ಯವಿಧಾನಗಳನ್ನು ಸಮನ್ವಯ ಮತ್ತು ಸಹಾಯ ಮಾಡಲು ಕನ್ನಡ ಭಾಷೆ ಸೇರಿದಂತೆ ಬಹುಭಾಷೆಗಳ ಸಂವಹನ ಹೊಂದಿರುವ ಸಹಾಯ ಕೇಂದ್ರಗಳು ಅಥವಾ ಮಾಹಿತಿ ಕೇಂದ್ರಗಳ ಸ್ಥಾಪನೆ ಮಾಡುವಂತೆ ಕೇರಳ ಸರಕಾರಕ್ಕೆ ಕೋರಲಾಗಿದೆ ಎಂದು ಅವರು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಅಥವಾ ವಿಶೇಷ ಅವಶ್ಯಕತೆಗಳ ಸಂದರ್ಭದಲ್ಲಿ ಕರ್ನಾಟಕದ ಅಧಿಕಾರಿಗಳೊಂದಿಗೆ ಸಮನ್ವಯವನ್ನು ಸಾಧಿಸಲು ಕೇರಳದಲ್ಲಿ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವಂತೆ ಕೋರಲಾಗಿದ್ದು, ಈ ನಿಟ್ಟಿನಲ್ಲಿ ನಿಮ್ಮ ಸಕಾರಾತ್ಮಕ ಸ್ಪಂದನೆ ಮತ್ತು ಅಗತ್ಯ ಸಹಕಾರಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.







