ಕಾಲೇಜು ವಿದ್ಯಾಥಿಗಳ ಚುನಾವಣೆ ಶುರು; ಶೀಘ್ರದಲ್ಲಿಯೇ ಆದೇಶ: ಡಾ.ಶರಣ ಪ್ರಕಾಶ ಪಾಟೀಲ್

ಸಚಿವ ಡಾ. ಶರಣ ಪ್ರಕಾಶ ಪಾಟೀಲ್ (File Photo)
ಬೆಂಗಳೂರು: ಪ್ರಜಾತಂತ್ರ ವ್ಯವಸ್ಥೆಯ ಕುರಿತು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳುವ ಸಲುವಾಗಿ ರಾಜ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳ ಚುನಾವಣೆ ಅನ್ನು ಶುರು ಮಾಡಲಾಗುತ್ತಿದ್ದು, ಈ ಸಂಬಂಧ 15 ದಿನದೊಳಗೆ ಆದೇಶ ಹೊರಡಿಸಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಲು ಕಾಲೇಜು ಮಟ್ಟದ ವಿದ್ಯಾರ್ಥಿ ಚುನಾವಣೆಗಳು ಅವಶ್ಯಕವಾಗಿವೆ. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದು, 15 ದಿನಗಳಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ತಳಮಟ್ಟದಿಂದಲೇ ನಾಯಕತ್ವ ವೃದ್ಧಿಸಿಕೊಳ್ಳಲು ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. 15 ದಿನದೊಳಗಾಗಿ ಸರಕಾರಿ ಆದೇಶ ಹೊರಡಿಸಲಾಗುವುದು. ಇದರಲ್ಲಿ ಚುನಾವಣೆ ಮಾರ್ಗಸೂಚಿ ಸೇರಿದಂತೆ ಇನ್ನಿತರೆ ಮಾನದಂಡಗಳ ಕುರಿತು ಉಲ್ಲೇಖ ಮಾಡಲಾಗುವುದು. ಪಿಯುಸಿ ಹಾಗೂ ಪದವಿ ಕಾಲೇಜುಗಳಲ್ಲಿ ಮೊದಲು ಹಂತದಲ್ಲಿ ಚುನಾವಣೆ ನಡೆಯಲಿದೆ. ಇದನ್ನು ನೋಡಿಕೊಂಡು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದರು.
ಚುನಾವಣೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು ಮಾತ್ರ ಚುನಾವಣೆ ಸ್ಪರ್ಧಿಸಬೇಕು. ರಾಜಕೀಯ ನಾಯಕರು ಕಾಲೇಜು ಆವರಣದೊಳಗೆ ಹೋಗಿ ಭಾಷಣ ಮಾಡುವಂತಿಲ್ಲ. ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ವಿವಿಧ ವಿದ್ಯಾರ್ಥಿ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರಬಾರದು. ಮಹಿಳಾ ವಿದ್ಯಾರ್ಥಿಗಳಿಗೆ ಒಂದೆರಡು ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಆಭ್ಯರ್ಥಿಗಳು ವೇದಿಕೆಗಳಲ್ಲಿ ರಾಜಕೀಯವಾಗಿ ಮಾತನಾಡಬಾರದೆಂದು ನಿಯಮ ಹೇರಲಾಗುವುದು ಎಂದು ಸಚಿವರು ತಿಳಿಸಿದರು.






