ʼಬರ ಅಧ್ಯಯನʼ ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ ಆಗಮನ

ಸಾಂದರ್ಭಿಕ ಚಿತ್ರ | PC : Image by magnific
ಬೆಂಗಳೂರು : ರಾಜ್ಯದಲ್ಲಿನ ಪ್ರಸಕ್ತ ಮುಂಗಾರು ಮಳೆಯಿಂದ ಉಂಟಾಗಿರುವ ತೀವ್ರ ಸ್ವರೂಪದ ಬರ ಪರಿಸ್ಥಿತಿಯ ಅಧ್ಯಯನಕ್ಕೆ ಕೇಂದ್ರ ಅಂತರ ಸಚಿವಾಲಯಗಳ ಅಧಿಕಾರಿಗಳ ತಂಡವು ಅಕ್ಟೋಬರ್ 3ಕ್ಕೆ ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು, ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಹತ್ತು ಮಂದಿ ಅಧಿಕಾರಿಗಳನ್ನೊಳಗೊಂಡ ಈ ಉನ್ನತ ಮಟ್ಟದ ಬರ ಅಧ್ಯಯನ ಸಮಿತಿಯನ್ನು ರಚಿಸಿದ್ದು, ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ್ ಸಾಹು ಅವರು ತಂಡದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಮೂರು ತಂಡ: ರಾಜ್ಯದಲ್ಲಿನ ಒಟ್ಟು 14.43ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಖುದ್ದು ಪರಿಶೀಲನೆಗೆ ಮೂರು ತಂಡಗಳನ್ನು ರಚನೆ ಮಾಡಲಾಗಿದೆ.
ಅಜೀತ್ ಕುಮಾರ್ ಸಾಹು ನೇತೃತ್ವದಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆ, ಡಾ.ಸುದಮ್ ಬಾಗ್ ನೇತೃತ್ವದಲ್ಲಿ ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಡಾ.ಮಾನ್ಸಿಂಗ್ ನೇತೃತ್ವದಲ್ಲಿ ಯಾದಗಿರಿ, ರಾಯಚೂರು, ಬಾಗಲಕೋಟೆ ಮತ್ತು ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಬರ ಪರಿಸ್ಥಿತಿಯನ್ನು ಮೂರು ತಂಡಗಳು ಅಧ್ಯಯನ ನಡೆಸಲಿವೆ.
ಅಕ್ಟೋಬರ್ 3ರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ತಂಡದ ಸದಸ್ಯರು, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ(ವಿಪತ್ತು ನಿರ್ವಹಣೆ)ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅನಂತರ ನಿಗದಿತ ಜಿಲ್ಲೆಗಳಿಗೆ ತೆರಳಿ ರೈತರ ಜಮೀನು ಮತ್ತು ಜಲಾಶಯಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಲಿದ್ದಾರೆ. ಆ ಬಳಿಕ ರಾಜ್ಯ ಸರಕಾರದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದು, ಬರ ಅಧ್ಯಯನ ಮುಗಿದ ಬಳಿಕ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದಾರೆ.






