ಬರ ಪೀಡಿತ ತಾಲೂಕುಗಳ ಪ್ರತಿ ರೈತನಿಗೆ 2500 ರೂ., ಸಾಲ ಪಾವತಿ ಅವಧಿಯೂ ವಿಸ್ತರಣೆ ಘೋಷಿಸಿದ ಸರಕಾರ

ಜಿ.ಪರಮೇಶ್ವರ್/ PC : Image by magnific
ಬೆಂಗಳೂರು : ರಾಜ್ಯದಲ್ಲಿ ಬರಪರಿಸ್ಥಿತಿ ತೀವ್ರ ಹಂತಕ್ಕೆ ತಲುಪಿರುವ ಹಿನ್ನೆಲೆ ಕೇಂದ್ರ ಸರಕಾರದ ಅನುದಾನಕ್ಕೆ ಕಾಯದೆ ಬರಪೀಡಿತ ತಾಲೂಕುಗಳ ಪ್ರತಿ ರೈತನಿಗೆ ಮೊದಲ ಹಂತದಲ್ಲಿ ತುರ್ತು 2,500 ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವ ಜತೆಗೆ, ರೈತರ ಸಾಲ ಮರುಪಾವತಿ ಅವಧಿ, ಮೊರಟೋರಿಯಂ ಕಾಲವನ್ನು 12 ತಿಂಗಳು ಹೆಚ್ಚಿಸುವುದು ಹಾಗೂ ಸಾಲ ಮರುಪಾವತಿ ಅವಧಿಯನ್ನು 36 ರಿಂದ 60 ತಿಂಗಳ ವರೆಗೆ ವಿಸ್ತರಣೆ ಮಾಡುವುದಾಗಿ ರಾಜ್ಯ ಕಾಂಗ್ರೆಸ್ ಸರಕಾರ ಘೋಷಣೆ ಮಾಡಿದೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಚರ್ಚೆಯಲ್ಲಿ ಉತ್ತರಿಸಿದ ಕಂದಾಯ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೇಂದ್ರ ಸರಕಾರದ ಎನ್ಡಿಆರ್ ಎಫ್ ಅನುದಾನದ ನಿರೀಕ್ಷೆ ಇಟ್ಟುಕೊಳ್ಳುವ ಜತೆಗೆ, ಬರಪೀಡಿತ ಪ್ರದೇಶದಲ್ಲಿರುವ ಪ್ರತಿ ರೈತನ ಖಾತೆಗೆ 2500 ರೂ.ಗಳನ್ನು ನೇರವಾಗಿ ಜಮೆ ಮಾಡಲಾಗುವುದು. ಇದರಿಂದ ಬರ ಹಾಗೂ ಸಂಕಷ್ಟದಿಂದ ತೊಂದರೆಗೊಳಗಾಗಿರುವ ರೈತರಿಗೆ ಸರಕಾರದ ಕಡೆಯಿಂದ ತಾತ್ಕಾಲಿಕ ಸಾಂತ್ವನದ ನೆರವಾಗಲಿದೆ.ಸದ್ಯ, 45ರಿಂದ50 ಲಕ್ಷ ರೈತರಿಗೆ ಅನುಕೂಲ ಆಗಲಿದ್ದು, 1250 ಕೋಟಿ ರೂಪಾಯಿ ಬಿಡುಗಡೆಗೆ ಆದೇಶಿಸಲಾಗಿದೆ ಎಂದರು.
ದಿವಾಳಿಯಾಗಿಲ್ಲ: ಆರ್ಥಿಕ ಇಲಾಖೆಯು ಹಣಕಾಸಿನ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಸಲಹೆ ಮತ್ತು ಎಚ್ಚರಿಕೆಗಳನ್ನು ನೀಡುವುದು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ರಾಜ್ಯ ಸರಕಾರ ದಿವಾಳಿಯಾಗಿದೆ ಅಥವಾ ಸರಕಾರದಲ್ಲಿ ಹಣವಿಲ್ಲ ಎಂದು ಹೇಳುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕರು ನಮ್ಮಲ್ಲಿ ಹಣವಿಲ್ಲ ಹಾಗೂ ಬರ ನಿರ್ವಹಣೆಗೂ ಹಣವಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ ಆರ್ಥಿಕ ಇಲಾಖೆಯ ಸಲಹೆಯನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಆದರೆ ಸರಕಾರ ಆರ್ಥಿಕವಾಗಿ ಎಡವದಂತೆ ನೋಡಿಕೊಳ್ಳುವುದು, ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರಿಸುವುದು ಹಾಗೂ ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳಲು ಸಲಹೆ ನೀಡುವುದು ಆರ್ಥಿಕ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಯಾವುದೇ ಸರಕಾರ ಅಧಿಕಾರದಲ್ಲಿದ್ದರೂ ಆರ್ಥಿಕ ಇಲಾಖೆ ಇಂತಹ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡುತ್ತದೆ. ಬಜೆಟ್ನಲ್ಲಿ ಅನುದಾನ ನಿಗದಿಪಡಿಸದೆ ಹೆಚ್ಚುವರಿ ಹಣ ಖರ್ಚು ಮಾಡಿದರೆ, ಅದಕ್ಕೆ ಹಣವನ್ನು ಎಲ್ಲಿಂದ ಹೊಂದಿಸಬೇಕು ಎಂಬ ಪ್ರಶ್ನೆಯನ್ನು ಆರ್ಥಿಕ ಇಲಾಖೆ ಮುಂದಿಡುತ್ತದೆ. ಎರಡೂ ಸದನಗಳು ಅನುಮೋದಿಸಿರುವ ಬಜೆಟ್ ಮತ್ತು ಹಣಕಾಸು ಮಸೂದೆಯ ವ್ಯಾಪ್ತಿಯನ್ನು ಮೀರಿ ಖರ್ಚು ಮಾಡಲು ಅವಕಾಶವಿರುವುದಿಲ್ಲ. ಹೆಚ್ಚುವರಿ ವೆಚ್ಚದ ಅಗತ್ಯವಿದ್ದರೆ ಪೂರಕ ಬಜೆಟ್ ಮಂಡಿಸಿ ಸದನದ ಅನುಮೋದನೆ ಪಡೆದು ಖರ್ಚು ಮಾಡಬೇಕು. ಇದು ಸರಕಾರಕ್ಕೆ ಇರಬೇಕಾದ ಕನಿಷ್ಠ ಹಣಕಾಸಿನ ಪ್ರಜ್ಞೆಯಾಗಿದೆ ಎಂದರು.
ಪ್ರಸ್ತಾವಿತ ಯೋಜನೆಯನ್ನು 2026-27 ಮತ್ತು 2027-28ನೆ ಸಾಲಿನಲ್ಲಿ ಎರಡು ವರ್ಷಗಳಲ್ಲಿ ಅನುಷ್ಠಾ ನಗೊಳಿಸಲು ಯೋಜಿಸಲಾಗಿದ್ದು, ಬಜೆಟ್ನಲ್ಲಿ ಅನುದಾನ ನಿಗದಿಯಾಗದೆ ಹಾಗೂ ಹಣ ಮೀಸಲಿಡದೆ 1,000 ಕೋಟಿ ರೂ., ಅಗತ್ಯವಿರುವ ಯೋಜನೆಯನ್ನು ಆರಂಭಿಸುವುದರಿಂದ ನಗದು ಹರಿವು ಮತ್ತು ಹಣಕಾಸು ನಿರ್ವಹಣೆಗೆ ಸಮಸ್ಯೆಯಾಗಬಹುದು ಎಂದು ಆರ್ಥಿಕ ಇಲಾಖೆ ತನ್ನ ಸಲಹೆಯಲ್ಲಿ ತಿಳಿಸಿದೆ. 2026-27ನೆ ಸಾಲಿನಲ್ಲಿ ವಿತ್ತೀಯ ಕೊರತೆ ಶೇ.2.95ರಷ್ಟಿದ್ದು, ಎಫ್ಆರ್ಬಿಎಂ ಅಡಿ ಅನುಮತಿಸಲಾದ ಮಿತಿ ಶೇ.3ರಷ್ಟಿದೆ. ಆದಾಯ ಕೊರತೆ 22,957 ಕೋಟಿಯಷ್ಟಿದೆ. GSDPUಗೆ ಒಟ್ಟು ಹೊಣೆಗಾರಿಕೆ ಶೇ.24.94ರಷ್ಟಿದ್ದು, ಅದು ಶೇ.25ರ ಮಿತಿಯ ಸಮೀಪದಲ್ಲಿದೆ. ಹೀಗಾಗಿ ನಿಗದಿತ ಹಣಕಾಸಿನ ಮಿತಿಯನ್ನು ಮೀರದಂತೆ ಎಚ್ಚರಿಸುವುದು ಆರ್ಥಿಕ ಇಲಾಖೆಯ ಕರ್ತವ್ಯ ಎಂದು ಅವರು ವಿವರಿಸಿದರು.






