ಫಿಸಿಯೋಥೆರಪಿ ಕೋರ್ಸ್‌ಗೆ ಈಗ ವ್ಯಾಪಕ ಮನ್ನಣೆ ದೊರೆಯುತ್ತಿದೆ : ಸ್ಪೀಕರ್ ಯು.ಟಿ.ಖಾದರ್
ಫಿಸಿಯೋಕಾನ್-25ನಲ್ಲಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ʼಜೀವಮಾನ ಸಾಧನೆಯ ಪ್ರಶಸ್ತಿʼ ಪ್ರದಾನ

ಬೆಂಗಳೂರು : ದೇಶದಲ್ಲಿ ಮೂರು ದಶಕಗಳ ಹಿಂದೆ ಫಿಸಿಯೋಥೆರಪಿ ಕೋರ್ಸ್ ಬಗ್ಗೆ ತಿಳಿದಿರಲಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಫಿಸಿಯೋಥೆರಪಿ ಕೋರ್ಸ್ ಆರಂಭಿಸಲಾಗಿತ್ತು. ಈಗ ಕೋರ್ಸ್ ಗೆ ವ್ಯಾಪಕ ಮನ್ನಣೆ ದೊರೆಯುತ್ತಿದೆ ಎಂದು ವಿಧಾನಸಭಾ ಸ್ವೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕರ್ನಾಟಕ ಫಿಸಿಯೋಕಾನ್ -25 ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಫಿಸಿಯೋಥೆರಪಿ ಕೋರ್ಸ್ ಉತ್ತಮ ಸೇವೆಯನ್ನು ಒದಗಿಸುವ ಪದವಿಯಾಗಿದ್ದು, ಕೋರ್ಸ್‌ನ ಬಗ್ಗೆ ಮಾಹಿತಿ ಒದಗಿಸುವ ಫಿಸಿಯೋಕಾನ್ -25 ರಾಜ್ಯದ ಮೊದಲ ಫಿಸಿಯೋಥೆರಪಿ ಅಂತಾರಾಷ್ಟ್ರೀಯ ಸಮ್ಮೇಳನವಾಗಿದೆ. ಇದರಲ್ಲಿ 7000ಕ್ಕೂ ಹೆಚ್ಚು ದೇಶ-ವಿದೇಶದ ವಿದ್ಯಾರ್ಥಿಗಳು, ವೃತ್ತಿಪರರು, ಗಣ್ಯರು ಭಾಗವಹಿಸಿರುವುದು ಅಭಿನಂದನೀಯ ಎಂದರು.
ಅಂತಾರಾಷ್ಟ್ರೀಯ ಸಮ್ಮೇಳನಗಳ ಮೂಲಕ ವೃತ್ತಿಪರರು ಒಂದು ಕಡೆ ಸೇರಲು ಸಾಧ್ಯವಾಗುತ್ತದೆ. ಇಲ್ಲಿ ಜ್ಞಾನ ಮತ್ತು ವೃತ್ತಿಗೆ ಸಂಬಂಧಿಸಿದ ನೆಟ್‌ವರ್ಕ್ ಅನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಯೋಜಿಸಿದ ಫಿಸಿಯೋಕಾನ್ -25 ಅರ್ಥಪೂರ್ಣವಾಗಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳು ಫಿಸಿಯೋಥೆರಪಿ ಕೋರ್ಸ್ ಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, ಫಿಸಿಯೋಥೆರಪಿ ಕೋರ್ಸ್ ಗಳಿಗೆ ಪ್ರವೇಶವು ಈಗ ನೀಟ್ ವ್ಯಾಪ್ತಿಗೆ ಬರಲಿದೆ. ಇದು ಪ್ರಮಾಣೀಕೃತ ವೈದ್ಯಕೀಯ ಶಿಕ್ಷಣದತ್ತ ರಾಷ್ಟ್ರೀಯ ನಡೆಗೆ ಪೂರಕವಾಗಿರುತ್ತದೆ. ಸಾಮರ್ಥ್ಯ ಆಧರಿತ ಕಲಿಕೆ ಮತ್ತು ಹೆಚ್ಚುವರಿ ಕ್ಲಿನಿಕಲ್ ಮಾನ್ಯತೆಗಾಗಿ ಕೋರ್ಸ್ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ನೀಡಿ ಗೌರವಿಸಲಾಯಿತು. ಡಾ.ರೊನಾಲ್ಡ್ ಕೊಲಾಸೊ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ರಾಜ್ಯಾದ್ಯಂತ ಮಾಡಿರುವ ವ್ಯಾಪಕ ಸಮಾಜ ಸೇವಾ ಚಟುವಟಿಕೆಗಳನ್ನು, ಸರ್ವಧರ್ಮೀಯ ಸೇವಾ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ ನೂರಾರು ದೇಣಿಗೆಗಳನ್ನು, ಹಾಗು ಸರಕಾರಿ ಇಲಾಖೆಗಳಿಗೂ ನೀಡಿರುವ ಸಹಕಾರವನ್ನು ಗೌರವಿಸಿ ಈ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ , ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋತೆರಪಿಸ್ಟ್ಸ್ ಅಧ್ಯಕ್ಷ ಡಾ.ಸಂಜೀವ್ ಕೆ ಝಾ, ಖ್ಯಾತ ಫಿಸಿಯೋತೆರಪಿಸ್ಟ್ ಡಾ.ಅಲಿ ಇರಾನಿ, ರಾಷ್ಟ್ರೀಯ ಅಲೈಡ್ ಮತ್ತು ಹೆಲ್ತ್ ಪ್ರೊಫೆಷನಲ್ಸ್ ಆಯೋಗದ ಅಧ್ಯಕ್ಷೆ ಯಜ್ಞ ಶುಕ್ಲಾ, ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷ ಕರ್ನಾಟಕ ಅಲೈಡ್ ಹೆಲ್ತ್ ಸಯನ್ಸಸ್ ಸಮಿತಿಯ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಮತ್ತಿತರರು ಉಪಸ್ಥಿತರಿದ್ದರು.
ಡಾ. ರೊನಾಲ್ಡ್ ಕೊಲಾಸೊ ಅವರ ಪರಿಚಯ :
ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ, ದಾನಿ ಡಾ.ರೊನಾಲ್ಡ್ ಕೂಲಾಸೊ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು.
ಡಾ.ರೊನಾಲ್ಡ್ ಕೊಲಾಸೋ ದಿವಂಗತ ಫ್ಯಾಬಿಯನ್ ಬಿ.ಎಲ್.ಕೊಲಾಸೊ ಮತ್ತು ಆಲಿಸ್ ಕೊಲಾಸೊ ಅವರ ಪುತ್ರ. ಡಾ.ರೊನಾಲ್ಡ್ ಕೊಲಾಸೋ ಅವರ ಪತ್ನಿ ಜೀನ್ ಕೊಲಾಸೊ. ಫ್ರೆಡ್ರಿಕ್ ಕೊಲಾಸೊ, ಜೆಸಿಂತಾ ರೊಸಾರಿಯೊ, ಜಾನ್ ರಾಬರ್ಟ್ ಕೊಲಾಸೊ ಮತ್ತು ಲವೀನಾ ಕ್ರಾಸ್ತಾರ ಸಹೋದರ. ಡಾ. ಕೊಲಾಸೊರಿಗೆ ನೈಗೆಲ್ ರುಫುಸ್ ಕೊಲಾಸೊ ಹಾಗೂ ರಾಂಡಲ್ ಶಾನ್ ಕೊಲಾಸೊ ಎಂಬಿಬ್ಬರು ಮಕ್ಕಳು. ಪುತ್ರ ನೈಗೆಲ್ ನಿಕಿತಾ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಅಮೆಲಿಯಾ ಕೊಲಾಸೊ ಎಂಬ ಪುತ್ರಿ ಇದ್ದಾರೆ.
ರೊನಾಲ್ಡ್ ಕೊಲಾಸೊ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮರ್ಕೆಂಟೈಲ್ ಲಾ (ವಾಣಿಜ್ಯ ಕಾನೂನು)ನಲ್ಲಿ ಪ್ರಥಮ ರ್ಯಾಂಕ್ ಪದವೀಧರ. ಬಳಿಕ ಅವರು ಅಥೆನ್ಸ್ ನ ಇಂಟರ್ ನ್ಯಾಶನಲ್ ಕೋಸ್ಟ್ ಅಕೌಂಟೆಂಟ್ಸ್ ಮತ್ತು ಮ್ಯಾನೇಜ್ ಮೆಂಟ್ ಅಕೌಂಟೆಂಟ್ಸ್ (ಐಸಿಎಎಂಎ) ನಿಂದ ಕೋಸ್ಟ್ ಕಂಟ್ರೋಲ್ ಮತ್ತು ಕೋಸ್ಟ್ ಮಾನಿಟರಿಂಗ್ ನಲ್ಲಿ ಪರಿಣತಿ ಪಡೆದಿದ್ದಾರೆ.
1975ರಲ್ಲಿ ಒಮಾನ್ ದೇಶದಲ್ಲಿ ಅಕೌಂಟೆಂಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಡಾ.ರೊನಾಲ್ಡ್ ಕೊಲಾಸೊ, ತಮ್ಮ ದಕ್ಷತೆ ಹಾಗೂ ನಿಷ್ಠಾವಂತ ದುಡಿಮೆಯಿಂದಾಗಿ ಗಲ್ಫ್ ನ ಎಂಟು ಹಾಗೂ ಯುರೋಪ್ ನ ಹಲವು ದೇಶಗಳಲ್ಲಿ ಅಕೌಂಟ್ಸ್ ಮುಖ್ಯಸ್ಥರಾಗಿ, ಆಡಳಿತ ವ್ಯವಸ್ಥಾಪಕರಾಗಿ, ಫೈನಾನ್ಸಿಯಲ್ ಕಂಟ್ರೋಲರ್ ಆಗಿ ಭಡ್ತಿ ಪಡೆಯುತ್ತಾ ಹೋದರು. ಗ್ರೀಸ್ ನ ಅಥೆನ್ಸ್ ನಲ್ಲಿರುವ ಸಿಸಿಐಸಿಎಲ್ , ಜರ್ಮನಿಯ ಮನ್ನೆಸ್ ಮನ್ ಹಾಗೂ ಮಿಲಾನೊದ ಸೈಪೇಮ್ ಎಂಬ ಮೂರು ಬೃಹತ್ ಬಹುರಾಷ್ಟ್ರೀಯ ಕಂಪೆನಿಗಳ ಒಕ್ಕೂಟದ ಕಮರ್ಷಿಯಲ್ ಸಿಇಒ ಆಗಿ ಆದರು.
ಆ ಸಂದರ್ಭದಲ್ಲಿ ಡಾ. ಕೊಲಾಸೋ ಅವರ ವೃತ್ತಿಪರತೆಯನ್ನು ಗಮನಿಸಿ ಪ್ರಮುಖ ಪೆಟ್ರೋಲಿಯಮ್ ಹಾಗೂ ಗ್ಯಾಸ್ ಯೋಜನೆಗಳು, ಟೌನ್ ಶಿಪ್ ಗಳು ಮತ್ತು ವಿಮಾನ ನಿಲ್ದಾಣ ನಿರ್ಮಾಣದಂತಹ ಬೃಹತ್ ಯೋಜನೆಗಳ ಉಸ್ತುವಾರಿಯನ್ನು ಅವರಿಗೆ ವಹಿಸಲಾಯಿತು. ತನಗೆ ವಹಿಸಿದ ಪ್ರತಿಯೊಂದು ಹುದ್ದೆಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ ರೊನಾಲ್ಡ್ ಕೊಲಾಸೋ ಉದ್ಯಮ ರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಮತ್ತೆ ಅವರು ಹಿಂದಿರುಗಿ ನೋಡಲೇ ಇಲ್ಲ.
ಉದ್ಯೋಗ, ಉದ್ಯಮ ಎರಡರಲ್ಲೂ ಅಸಾಮಾನ್ಯ ಯಶಸ್ಸು ಕಂಡ ರೊನಾಲ್ಡ್ ಕೊಲಾಸೋ ಅವರು ಸಮಾಜ ತನಗೆ ನೀಡಿದ ಹಾಗೆಯೇ ತಾನೂ ಸಮಾಜಕ್ಕೆ ನೀಡಬೇಕು ಎಂದು ಪಣತೊಟ್ಟು ಸೇವಾ ಚಟುವಟಿಕೆಗಳಿಗೆ ಧುಮುಕಿದರು. ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಎಲ್ಲೆಲ್ಲಿ ಜನರಿಗೆ ಏನೇನು ಅಗತ್ಯವಿದೆಯೋ ಅದನ್ನು ಒದಗಿಸುತ್ತಾ ಹೋದರು. ಆ ಪೈಕಿ ಸಾರ್ವಜನಿಕರಿಗೆ ಪ್ರಯೋಜನವಾಗುವ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಿ ಕೊಡುವಲ್ಲಿ ಅವರು ಅಪಾರ ಕಾಳಜಿ ವಹಿಸಿದರು. ಅದೆಷ್ಟೋ ಜನರು, ಸಂಸ್ಥೆಗಳು, ಸಂಘಟನೆಗಳಿಗೆ ಕೊಲಾಸೋ ನೆರವು ನೀಡಿದ್ದಾರೆ. ಸರಕಾರಕ್ಕೆ ಹಲವಾರು ಕಚೇರಿ, ಕಟ್ಟಡಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮಂದಿರ, ಮಸೀದಿ, ಚರ್ಚ್ ಗಳನ್ನೂ ಕಟ್ಟಿಸಿಕೊಟ್ಟಿದ್ದಾರೆ.
ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅವರ ಸೇವೆಯ ವ್ಯಾಪ್ತಿ ಹಬ್ಬಿದೆ.
ಜನರಿಗೆ ನೆರವಾಗುವುದು, ಅವರ ಜೊತೆ ನಮ್ಮ ಸಂಪತ್ತನ್ನು ಹಂಚಿಕೊಳ್ಳುವುದರಿಂದ ನನಗೆ ಬಹಳ ತೃಪ್ತಿ, ಸಂತಸ ಹಾಗೂ ನೆಮ್ಮದಿ ಸಿಕ್ಕಿದೆ. ಇದರಿಂದ ನಮಗೆ ಧರ್ಮ ಕಲಿಸುವ ಮೌಲ್ಯಗಳ ಸಮೀಪ ಇರುವುದು ನನಗೆ ಸಾಧ್ಯವಾಗಿದೆ ಎನ್ನುತ್ತಾರೆ ಕೊಲಾಸೊ.
ಅವರ ಪತ್ನಿ ಜೀನ್ ಕೊಲಾಸೊ ಅವರು ಪತಿಯ ಸೇವೆಯ ಹಂಬಲಕ್ಕೆ ಆಸರೆಯಾಗಿ ನಿಂತಿದ್ದಾರೆ. ಯುಕೆ ಸಂಸತ್ತಿನಲ್ಲೂ ಗೌರವ ಸ್ವೀಕರಿಸಿರುವ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ಕಳೆದ ವರ್ಷ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.







