‘ಮಾದಕ ದ್ರವ್ಯ ಮುಕ್ತ ಕರ್ನಾಟಕ’ ನಿರ್ಮಿಸಲು ಸರಕಾರ ಬದ್ಧ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣಕ್ಕೆ ಕೇವಲ ಕಾನೂನು ಜಾರಿ ಅಷ್ಟೇ ಅಲ್ಲದೆ, ಸಾರ್ವಜನಿಕರು, ಯುವ ಸಮುದಾಯ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆ ಅತ್ಯಂತ ಅವಶ್ಯಕವಾಗಿದೆ. ಗೃಹ ಇಲಾಖೆಯ ಕಾನೂನು ಜಾರಿ ವ್ಯವಸ್ಥೆಯೊಂದಿಗೆ ವಿವಿಧ ಇಲಾಖೆಗಳನ್ನು ಸಮನ್ವಯಗೊಳಿಸಿ ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖಾ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದಕ ದ್ರವ್ಯಗಳ(ಡ್ರಗ್ಸ್) ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮತ್ತು ಯುವ ಪೀಳಿಗೆಯನ್ನು ಈ ಪಿಡುಗಿನಿಂದ ರಕ್ಷಿಸಲು ರಾಜ್ಯ ಸರಕಾರವು ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಕೇವಲ ನಗರ ಪ್ರದೇಶಗಳಷ್ಟೇ ಅಲ್ಲದೆ, ಗ್ರಾಮೀಣ ಮಟ್ಟದಲ್ಲಿಯೂ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳು, ಕಾಲೇಜುಗಳು, ಕಾರ್ಖಾನೆಗಳು ಮತ್ತು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳ ಮೂಲಕ ವ್ಯಾಪಕ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಮಾದಕ ದ್ರವ್ಯಗಳನ್ನು ಸರಬರಾಜು ಮಾಡುವ ಮತ್ತು ಇದರ ಜಾಲದ ಹಿಂದೆ ಇರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆಯು ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಈ ಸಂಬಂಧದ ಕಾನೂನುಗಳನ್ನು ಅತ್ಯಂತ ಬಿಗಿಯಾಗಿ ಪಾಲಿಸಬೇಕು ಎಂದು ಪ್ರಿಯಾಂಕ್ ಖರ್ಗೆ ನಿರ್ದೇಶಿಸಿದರು.
ಮಾದಕ ದ್ರವ್ಯಗಳ ನಿಯಂತ್ರಣ ಕೇವಲ ಒಂದು ಇಲಾಖೆಯ ಜವಾಬ್ದಾರಿಯಲ್ಲ. ಗೃಹ(ಪೊಲೀಸ್), ಉನ್ನತ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಕಾರಮಿಕ, ಸಮಾಜಕಲ್ಯಾಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಇದಕ್ಕಾಗಿ ರಾಜ್ಯದ ಸುಧಾರಿತ ತಂತ್ರಜ್ಞಾನ ಮತ್ತು ದತ್ತಾಂಶ ವ್ಯವಸ್ಥೆಗಳನ್ನು ಬಳಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇ-ಆಡಳಿತ ಇಲಾಖೆಯ ಮಹತ್ವಾಕಾಂಕ್ಷಿ ‘ಕರ್ನಾಟಕ ರಾಜ್ಯ ವ್ಯಾಪಕ ವಲಯ ಜಾಲ' ಯೋಜನೆಯಡಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳವರೆಗೆ ಸುರಕ್ಷಿತ ಮತ್ತು ಬಿಗಿ ಸಂಪರ್ಕ ಜಾಲವನ್ನು ವಿಸ್ತರಿಸಲಾಗುತ್ತಿದೆ. ಈ ತಂತ್ರಜ್ಞಾನ ಮೂಲಸೌಕರ್ಯವನ್ನು ಬಳಸಿಕೊಂಡು ಗ್ರಾಮೀಣ ಮಟ್ಟದಲ್ಲಿ ಇಲಾಖೆಗಳ ಉಸ್ತುವಾರಿ ಮತ್ತು ಜಾಗೃತಿ ಮೂಡಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ಮಾದಕ ದ್ರವ್ಯಗಳ ಮಾರಾಟ ಅಥವಾ ಬಳಕೆಯ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ರಾಜ್ಯದ ಸುಧಾರಿತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಾದ 'ಜನಸ್ಪಂದನ' ಪ್ಲಾಟ್‍ಫಾರ್ಮ್ ಅನ್ನು ಮತ್ತಷ್ಟು ಸಶಕ್ತಗೊಳಿಸಲಾಗುವುದು. ನಾಗರಿಕರು ನೀಡುವ ದೂರುಗಳನ್ನು ತಳಮಟ್ಟದ ಅಧಿಕಾರಿಗಳೊಂದಿಗೆ ಮ್ಯಾಪ್ ಮಾಡಿ, ಕಟ್ಟುನಿಟ್ಟಾದ ಎಸ್‍ಎಲ್‍ಎ (ಸೇವಾ ಮಟ್ಟದ ಒಪ್ಪಂದ) ಮತ್ತು ಕಾಲಮಿತಿಯೊಳಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದರು.
ಮಾದಕ ದ್ರವ್ಯ ಮುಕ್ತ ಅಭಿಯಾನಕ್ಕೆ ಪೂರಕವಾಗಿ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ‘ಬಿಸಿನೆಸ್ ಪ್ರೊಸೆಸ್ ರಿ-ಇಂಜಿನಿಯರಿಂಗ್' ಚಟುವಟಿಕೆಗಳನ್ನು ಗೃಹ (ಪೊಲೀಸ್) ಮತ್ತು ಶಿಕ್ಷಣ ಇಲಾಖೆಗಳಲ್ಲಿ ಇನ್ನಷ್ಟು ವೇಗಗೊಳಿಸಿ, ಇಲಾಖೆಗಳ ನಡುವಿನ ದತ್ತಾಂಶ ವಿನಿಮಯ ಮತ್ತು ಪರಿಶೀಲನಾ ಪ್ರಕ್ರಿಯೆಯನ್ನು ಸರಳಗೊಳಿಸಲು ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ವಿ.ರಶ್ಮಿ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.






