ಜೈಲುಗಳಲ್ಲಿ ಮಾದಕ ವಸ್ತುಗಳ ಜಾಲ ತಡೆಗೆ ಕ್ರಮ: ರಾಜ್ಯದ ಎಲ್ಲ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಪರೀಕ್ಷೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಸಿಬ್ಬಂದಿಯಿಂದಲೂ ಮಾದಕ ವಸ್ತುಗಳು ಜೈಲಿಗೆ ಸಾಗಣೆಯಾದ ಘಟನೆಗಳ ಹಿನ್ನೆಲೆ, ನಿಮ್ಹಾನ್ಸ್ ಸಹಯೋಗದೊಂದಿಗೆ ಕೈದಿಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.
ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಸೂಚನೆಯಂತೆ ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಬಂಧಿತರಲ್ಲಿ ಡ್ರಗ್ ಸೇವನೆ ತಡೆಯುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾರಂಭಿಕ ಹಂತದಲ್ಲಿ ರಾಜ್ಯದ ಎಲ್ಲ ಜೈಲುಗಳಲ್ಲಿ ಶೇ.10ರಷ್ಟು ಕೈದಿಗಳನ್ನು ಆಯ್ಕೆ ಮಾಡಿ ಗಾಂಜಾ, ಹೆರೊಯಿನ್, ಕೊಕೇನ್ ಮುಂತಾದ ಮಾದಕ ವಸ್ತುಗಳಿಗಾಗಿ ವಿಶೇಷ ಕಿಟ್ಗಳ ಸಹಾಯದಿಂದ ಪರೀಕ್ಷೆ ನಡೆಸಲಾಗುತ್ತಿದೆ. ಮಾದಕ ವಸ್ತು ಬಳಕೆ ಕಂಡುಬಂದರೆ, ವ್ಯಸನಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಅಂತಹವರಿಗೆ ಸಮಾಲೋಚನೆ ನೀಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.





