ಬಿಜೆಪಿ ಪಕ್ಷದಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ : ಡಿ.ವಿ.ಸದಾನಂದಗೌಡ
"ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಲೋಚಿಸಿ ಮಾತನಾಡಬೇಕು"

ಡಿ.ವಿ.ಸದಾನಂದಗೌಡ
ಬೆಂಗಳೂರು : ‘ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯಾವುದೇ ವಿಚಾರಗಳ ಬಗ್ಗೆಯೇ ಆದರೂ ಆಲೋಚಿಸಿ ಮಾತನಾಡಬೇಕು. ಅವರ ಮಾತಿಗೆ ಒಂದು ತೂಕ ಇರಬೇಕು. ಇಲ್ಲದೆ ಇದ್ದರೆ ಗೊಂದಲಗಳು ಆಗುವುದು ಸಹಜ’ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿಕೆಗೆ ಪರೋಕ್ಷವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಈ ಹಿಂದೆಯೂ ಬಿಜೆಪಿಯ ನಾಯಕರು ನೀಡಿದ ಹೇಳಿಕೆಯಿಂದ ಗೊಂದಲ ಆಗಿದ್ದನ್ನು ನಾವು ನೋಡಿದ್ದೇವೆ. ಇದರಿಂದ ಪಕ್ಷಕ್ಕೆ ತೊಂದರೆ ಉಂಟಾಗುತ್ತದೆ. ಹೀಗಾಗಿ ಪಕ್ಷದ ಮುಖಂಡರು ಆಲೋಚಿಸಿ ಮಾತನಾಡಬೇಕು ಎಂದು ಸಲಹೆ ನೀಡಿದರು.
ಶುದ್ದೀಕರಣ ಆಗುತ್ತಿದೆ: ಬಿಜೆಪಿ ಪಕ್ಷದಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ. ಅಶಿಸ್ತು ಮೈಗೂಡಿಸಿಕೊಂಡವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಎರಡನೇ ಹಂತದ ಶುದ್ಧೀಕರಣ ಪ್ರಕ್ರಿಯೆ ನಡೆಸಿದ್ದು, ಎಲ್ಲರನ್ನೂ ಪಕ್ಷದಿಂದ ಹೊರಹಾಕಲು ಸಾಧ್ಯವಿಲ್ಲ. ಹೀಗಾಗಿ ಅಸಮಾಧಾನಿತರನ್ನು ಕರೆದು ಸರಿಮಾಡಲಾಗುತ್ತಿದೆ ಎಂದರು.
ಎಲ್ಲರನ್ನು ಪಕ್ಷದಿಂದ ಹೊರಹಾಕಿದರೆ ಪಕ್ಷ ಉಳಿಯಬೇಕಲ್ಲ. ಹೀಗಾಗಿ ಸಣ್ಣ-ಪುಟ್ಟ ಗುಂಪುಗಳನ್ನು ಕರೆದು ಮಾತನಾಡಿ ಸಮಾಧಾನ ಮಾಡಲಾಗುತ್ತಿದೆ. ಅಲ್ಲದೆ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಒಳಿತಿಗೆ ಕೆಲಸ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಪಕ್ಷದಲ್ಲಿ ಒಳ್ಳೆಯ ಬೆಳವಣಿಗೆಗಳು ಆಗುತ್ತಿವೆ ಎಂದು ಅವರು ತಿಳಿಸಿದರು.







