ಜು.1ರಿಂದ ಒಂದು ತಿಂಗಳು ಕಾಲ ‘ಇ-ಖಾತಾ ಅಭಿಯಾನ’ : ಡಿಸಿಎಂ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಬಿಬಿಎಂಪಿ)ದ ವ್ಯಾಪ್ತಿಯಲ್ಲಿ ಜು.1ರಿಂದ ಒಂದು ತಿಂಗಳ ಕಾಲ ಇ ಖಾತಾ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ನೀವುಗಳು ಭಾಗವಹಿಸಿ ನಿಮ್ಮ ಆಸ್ತಿಗಳಿಗೆ ಇ ಖಾತಾ ಮಾಡಿಸಿಕೊಂಡು ವಂಚನೆಯಿಂದ ತಪ್ಪಿಸಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರ್ವಜನಿಕರಿಗೆ ಕರೆ ನೀಡಿದರು.
ರವಿವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಬಿಬಿಎಂಪಿ) ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಬ್ಯಾಟರಾಯನಪುರದ ಸಹಕಾರ ನಗರ ಮೈದಾನದಲ್ಲಿ ನಡೆದ ಬೃಹತ್ ಇ ಖಾತಾ ಮೇಳ ಹಾಗೂ ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನ ಎಲ್ಲ ವಾರ್ಡ್ ಗಳಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತೇವೆ. ನಿಮಗೆ ನಮ್ಮ ಅಧಿಕಾರಿಗಳು, ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ. ರಾಜ್ಯದ ಗ್ಯಾರಂಟಿ ಸರಕಾರವು ಸಚಿವ ಕೃಷ್ಣ ಬೈರೇಗೌಡ ಅವರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡುತ್ತಿದೆ. ಇಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದೇವೆ ಎಂದು ಅವರು ಹೇಳಿದರು.
ನಾವು ಕೇವಲ ಮತಕ್ಕೆ ರಾಜಕಾರಣ ಮಾಡಿದವರಲ್ಲ. ನಿಮ್ಮ ಹಿತಕ್ಕೆ, ನಿಮ್ಮ ಬದುಕು ಹಾಗೂ ನಿಮ್ಮ ಆಸ್ತಿ ರಕ್ಷಣೆಗೆ ನಾವು ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಉಳುವವನಿಗೆ ಭೂಮಿ ಕೊಟ್ಟಿದ್ದು, ಎ ಖಾತಾ ಇಲ್ಲದವರಿಗೆ ಬಿ ಖಾತಾ ಕೊಟ್ಟಿದ್ದೇವೆ, ಬಗರ್ ಹುಕುಂ ಸಾಗುವಳಿ ರೈತರಿಗೆ ಭೂಮಿ ನೀಡಿದ್ದೇವೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ್ದೆವು. ಭೂಮಿ ಯೋಜನೆ ಮೂಲಕ ರೈತರಿಗೆ ಕೇವಲ 5 ರೂ.ಗೆ ಖಾತಾ ದಾಖಲೆ ನೀಡಿದ್ದೇವೆ ಎಂದು ಶಿವಕುಮಾರ್ ಸ್ಮರಿಸಿದರು.
ನಿಮ್ಮ ಆಸ್ತಿಗಳ ದಾಖಲೆಗಳನ್ನು ಸರಿಪಡಿಸಲು ಪಾಲಿಕೆ ವ್ಯಾಪ್ತಿಯಲ್ಲಿ ನಿಮ್ಮ ಆಸ್ತಿ ದಾಖಲೆ ಸ್ಕ್ಯಾನ್ ಮಾಡಿಸಲಾಗಿದೆ. ನಿಮ್ಮ ಕ್ಷೇತ್ರದಲ್ಲಿ ಯಾರೂ ಲಂಚ ನೀಡದೇ, ಅವರ ಆಸ್ತಿ ಖಾತಾ ದಾಖಲೆ ಪಡೆಯಬೇಕು ಎಂಬುದು ನನ್ನ ಆಲೋಚನೆ. ನನ್ನ ಈ ಕನಸಿನ ಯೋಜನೆಗೆ ಕೃಷ್ಣ ಬೈರೇಗೌಡ ಬೆಂಬಲವಾಗಿ ನಿಂತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ತಾಂಡಾ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ 1,11,111 ಜನರಿಗೆ ಉಚಿತವಾಗಿ ದಾಖಲೆ ಪತ್ರ ನೀಡಿದ್ದೇವೆ. ಆಮೂಲಕ ನಮ್ಮ ಸರಕಾರ ಆರನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’ ಯೋಜನೆ ಜಾರಿಗೆ ತಂದಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಎಲ್ಲ ಆಸ್ತಿಗಳ ಡಿಜಿಟಲಿಕರಣಗೊಳಿಸಿ ನಿಮ್ಮ ಮನೆ ಬಾಗಿಲಿಗೆ ನೀಡುವಂತೆ ಕ್ರಾಂತಿಕಾರಿ ಬದಲಾವಣೆ ತರಲು ತೀರ್ಮಾನಿಸಿದ್ದೇನೆ. ನೀವು ನಿಮ್ಮ ಆಸ್ತಿ ದಾಖಲೆಗಳನ್ನು ಅಪ್ ಲೋಡ್ ಮಾಡಿ ಈ ಖಾತಾ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ಇದು ಸಾಧ್ಯವಾಗದೆ ಇದ್ದರೆ ನಿಮಗೆ ನೀಡಲಾಗಿರುವ ದೂರವಾಣಿಗೆ ಕರೆ ಮಾಡಿ. ಅವರೇ ಬಂದು ನಿಮ್ಮ ದಾಖಲೆ ಅಪ್ ಲೋಡ್ ಮಾಡಿ ಇ ಖಾತಾ ಮಾಡುತ್ತಾರೆ ಎಂದು ಶಿವಕುಮಾರ್ ವಿವರಿಸಿದರು.
ಪಾಲಿಕೆ ವ್ಯಾಪ್ತಿಯ 25 ಲಕ್ಷ ಆಸ್ತಿಗಳ ಪೈಕಿ 5 ಲಕ್ಷ ಆಸ್ತಿ ದಾಖಲೆಗಳನ್ನು ಈ ರೀತಿ ವಿತರಣೆ ಮಾಡಲಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 50 ಸಾವಿರ ಮನೆಗಳಿಗೆ ಈ ದಾಖಲೆ ವಿತರಣೆ ಮಾಡಲಾಗಿದೆ. ನಿಮ್ಮ ಗುರುತಿನ ಚೀಟಿಗೆ ಹೇಗೆ ಪ್ರತ್ಯೇಕ ಸಂಖ್ಯೆ ನೀಡಲಾಗಿದೆಯೋ ಅದೇ ರೀತಿ ನಿಮ್ಮ ಆಸ್ತಿಗಳಿಗೂ ಪ್ರತ್ಯೇಕ ಸಂಖ್ಯೆ ನೀಡಲು ನಿಮ್ಮ ಸರಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಹಾಗೂ ಸಮಗ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಈ ಪೈಕಿ ಪಿಆರ್ಆರ್ ರಸ್ತೆ ನಿಮ್ಮ ಕ್ಷೇತ್ರದಲ್ಲಿ ಹಾದು ಹೋಗಲಿದೆ ಎಂದು ಅವರು ಹೇಳಿದರು.
ಇನ್ನು ಮುಂದೆ ನೀವು ಮನೆ ಕಟ್ಟುವಾಗ ಕಟ್ಟಡ ನಕ್ಷೆ ಅನುಮತಿಗಾಗಿ ಕಚೇರಿ ಗಳಿಗೆ ಅಲೆಯುವಂತಿಲ್ಲ. ನಂಬಿಕೆ ನಕ್ಷೆ ಯೋಜನೆ ಮೂಲಕ 50/80 ವಿಸ್ತೀರ್ಣವರೆಗಿನ ನಿವೇಶನವರೆಗೂ ಕಟ್ಟಡ ನಕ್ಷೆಯನ್ನು ನೋಂದಾಯಿತ ಇಂಜಿನಿಯರ್ ಗಳ ಮೂಲಕ ಒಂದೇ ದಿನದಲ್ಲಿ ಅನುಮತಿ ಪಡೆಯಬಹುದು. ಈ ಯೋಜನೆ ಮೂಲಕ ನಾವು ಈವರೆಗೂ 9 ಸಾವಿರ ಕಟ್ಟಡ ನಕ್ಷೆಗಳಿಗೆ ಮಂಜೂರಾತಿ ನೀಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಈ ಕ್ಷೇತ್ರದಲ್ಲಿ ಅಗತ್ಯ ಮೇಲ್ಸೇತುವೆ, ರಸ್ತೆ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತದ ಯೋಜನೆ ಹಮ್ಮಿಕೊಳ್ಳಲಾಗಿದೆ. ಕೃಷ್ಣ ಬೈರೇಗೌಡ ಅವರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಬೆಂಗಳೂರಿನ ಕೊಳಚೆ ನೀರು ಕಾಲುವೆಗಳ ತಡೆಗೋಡೆ ಎತ್ತರಿಸಲು 2 ಸಾವಿರ ಕೋಟಿ ರೂ. ಅನುದಾನ ತಂದಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಮನೆ ಕಟ್ಟಿದರೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಈಗಾಗಲೇ ಮನೆ ಕಟ್ಟಿರುವ ಸಾರ್ವಜನಿಕರಿಗೆ ನಾವು ಹೇಗೆ ಸಹಾಯ ಮಾಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ನಾವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆ ಎಂಬುದಕ್ಕಿಂತ, ಅಧಿಕಾರ ಇದ್ದಾಗ ನಾವು ಏನು ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ. ಬೆಂಗಳೂರು ಕಟ್ಟಿದ ಕೆಂಪೇಗೌಡರನ್ನು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಬೆಂಗಳೂರನ್ನು ಅಭಿವೃದ್ಧಿ ಮಾಡಿದ ಎಸ್.ಎಂ ಕೃಷ್ಣ ಅವರನ್ನು ನಾವು ಸ್ಮರಿಸುತ್ತೇವೆ. ಅದೇ ರೀತಿ ನೀವು ನಿಮ್ಮ ಆಸ್ತಿ ದಾಖಲೆ ನೀಡಿ, ನಿಮ್ಮ ಆಸ್ತಿ ಕಾಪಾಡಿದ ಕೃಷ್ಣ ಬೈರೇಗೌಡ ಅವರನ್ನು ಸದಾ ಸ್ಮರಿಸಬೇಕು. ಮುಂದಿನ ಚುನಾವಣೆಯಲ್ಲಿ ನೀವು ಕೃಷ್ಣ ಬೈರೇಗೌಡ ಅವರನ್ನು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು" ಎಂದು ಶಿವಕುಮಾರ್ ಮನವಿ ಮಾಡಿದರು.







