ಇ-ಖಾತಾ ನೆಪವೊಡ್ಡಿ ನ್ಯಾಯಾಲಯದಿಂದ ಡಿಕ್ರಿಯಾದ ಕ್ರಯಪತ್ರ ನೋಂದಣಿ ನಿರಾಕರಣೆ ಸಲ್ಲದು: ಮಾರ್ಗಸೂಚಿ ರೂಪಿಸಿದ ಹೈಕೋರ್ಟ್

ಬೆಂಗಳೂರು : ನ್ಯಾಯಾಲಯದ ಡಿಕ್ರಿ ಆದೇಶದ ಹೊರತಾಗಿಯೂ ಆಸ್ತಿಯ ಇ-ಖಾತಾ ಇಲ್ಲದಿರುವುದನ್ನು ಮುಂದಿಟ್ಟುಕೊಂಡು ಕ್ರಯಪತ್ರ ನೋಂದಣಿ ನಿರಾಕರಿಸಲಾಗದು ಎಂದು ಆದೇಶಿಸಿರುವ ಹೈಕೋರ್ಟ್, ಈ ಸಂಬಂಧ ಹಲವು ಮಾರ್ಗಸೂಚಿಗಳನ್ನು ರೂಪಿಸಿದೆ.
ವಿಚಾರಣಾ ನ್ಯಾಯಾಲಯದ ಡಿಕ್ರಿಯ ಹೊರತಾಗಿಯೂ ಇ-ಖಾತಾ ಇಲ್ಲ ಎಂಬ ಕಾರಣಕ್ಕೆ ನೋಂದಣಿ ಮಾಡಲು ನಿರಾಕರಿಸಿ ತುಮಕೂರು ಜಿಲ್ಲೆಯ ನೋಂದಣಾಧಿಕಾರಿ 2025ರ ಆಗಸ್ಟ್ 28ರಂದು ನೀಡಿದ್ದ ಹಿಂಬರಹ ಪ್ರಶ್ನಿಸಿ ತುಮಕೂರಿನ ಪಿ.ಎಸ್. ಅಶೋಕ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿಯನ್ನು ಇತ್ತೀಚೆಗೆ ಪುರಸ್ಕರಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇ-ಖಾತಾ ಇಲ್ಲ ಎಂದು ಕ್ರಯ ಪತ್ರ ನೋಂದಣಿ ಮಾಡಲು ನಿರಾಕರಿಸಿರುವ ಸರ್ಕಾರದ ಪ್ರಾಧಿಕಾರದ ನಿರ್ಧಾರ ಒಪ್ಪಿತವಲ್ಲ ಎಂದು ಅಭಿಪ್ರಾಯಪಟ್ಟಿದೆ.
ಕಾನೂನು ಮತ್ತು ಡಿಕ್ರಿ ಆದೇಶಗಳ ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದ ಮೊದಲ ತತ್ವಕ್ಕೆ ಇದು ವಿರುದ್ಧವಾಗಿದೆ. ಈ ಪರಿಸ್ಥಿತಿಯು ಪದೇಪದೆ ನ್ಯಾಯಾಲಯದ ಮುಂದೆ ಬರುತ್ತಿದೆ. ಇದು ಆಡಳಿತಾತ್ಮಕ ಚೌಕಟ್ಟಿನಲ್ಲಿ ಸಮಸ್ಯೆಯಾಗಿದ್ದು, ನ್ಯಾಯಾಲಯದ ಆದೇಶ ಪಾಲಿಸುವುದಕ್ಕೆ ಬದಲಾಗಿ ಡಿಕ್ರಿ ಆದೇಶ ಜಾರಿಗೊಳಿಸಲು ಅಸಾಧ್ಯವಾದ ಸನ್ನಿವೇಶವನ್ನು ನಿರ್ಮಿಸಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಒಮ್ಮೆ ನ್ಯಾಯಾಲಯದಲ್ಲಿ ಡಿಕ್ರಿಯಾದರೆ ಅದು ಹಕ್ಕಿನ ಘೋಷಣೆ ಮಾತ್ರವಲ್ಲ ಕಾನೂನಿನ ಅಡಿ ಕಾರ್ಯಗತಗೊಳಿಸಬೇಕಾದ ಸಂದೇಶವಾಗಿದೆ. ನ್ಯಾಯಾಲಯದ ಆಯುಕ್ತರನ್ನು ನೇಮಿಸುವುದೂ ಸೇರಿದಂತೆ ವಿಚಾರಣಾ ನ್ಯಾಯಾಲಯಕ್ಕೆ ಡಿಕ್ರಿಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವಂಥ ಅಸಾಧ್ಯವಾದ ಅಧಿಕಾರ ನೀಡಲಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಡಿಕ್ರಿ ಆದೇಶದ ಫಲವನ್ನು ನಿಷ್ಪಲಗೊಳಿಸಲು ನಗರ ಪಾಲಿಕೆಗಳು, ನೋಂದಣಿ ಪ್ರಾಧಿಕಾರಗಳು ಸೇರಿ ಕಾರ್ಯಕಾರಿ ಪ್ರಾಧಿಕಾರಗಳು ಹೈಪರ್ ತಾಂತ್ರಿಕ ಅಥವಾ ನಿಷ್ಠುರ ನಡೆಯನ್ನು ಪಾಲಿಸಲು ಅನುಮತಿಸಲಾಗದು. ಸರ್ಕಾರದ ಪ್ರಾಧಿಕಾರಗಳ ಹೊಣೆಗಾರಿಕೆಯು ನಿಯಂತ್ರಣ ಮಾತ್ರವಲ್ಲ, ಬದಲಿಗೆ ನ್ಯಾಯಾಂಗ ಆದೇಶಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯೂ ಅವರ ಮೇಲಿದೆ. ಇಂಥ ಪ್ರಕರಣಗಳಲ್ಲಿ ಸ್ಪಷ್ಟವಾದ ಆಡಳಿತಾತ್ಮಕ ಶಿಷ್ಟಾಚಾರದ ಕೊರತೆಯಿಂದಾಗಿ ಅಸಂಗತ ಪ್ರಕ್ರಿಯೆ ಚಾಲನೆಯಲ್ಲಿದೆ. ಇಲ್ಲಿನ ಕೊರತೆಯನ್ನು ನೀಗಿಸಿ, ಸೂಕ್ತ ಮಾರ್ಗಸೂಚಿ ರೂಪಿಸಲು ನ್ಯಾಯಾಂಗ ಮಧ್ಯಪ್ರವೇಶಿಸುವುದ ಅಗತ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದರ ಭಾಗವಾಗಿ ಸಾಂಸ್ಥಿಕ ಕೊರತೆಗಳನ್ನು ಸರಿದೂಗಿಸುವ ಸಂಬಂಧ ನ್ಯಾಯಾಲಯದ ಡಿಕ್ರಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ವಿಚಾರಣಾ ನ್ಯಾಯಾಲಯ (ಎಕ್ಸಿಕ್ಯೂಟಿಂಗ್ ಕೋರ್ಟ್), ಸ್ಥಳೀಯ ಸಂಸ್ಥೆಗಳು ಮತ್ತು ಇತರ ನೋಂದಣಿ ಪ್ರಾಧಿಕಾರಗಳು ಪಾಲಿಸಲೇಬೇಕಾದ ಕೆಲ ಮಾರ್ಗಸೂಚಿಗಳನ್ನು ನ್ಯಾಯಪೀಠ ರೂಪಿಸಿದೆ.
ಹೈಕೋರ್ಟ್ ಮಾರ್ಗಸೂಚಿಗಳು:
* ನ್ಯಾಯಾಲಯದಿಂದ ಅಂತಿಮ ಡಿಕ್ರಿಯಾದ ಬಳಿಕ ತೀರ್ಪಿನ ಸಾಲಗಾರರು (ಜಡ್ಜ್‌ಮೆಂಟ್ ಡೆಟರ್) ಕ್ರಯಪತ್ರ ನೋಂದಣಿ ಮಾಡಿಸಲು ವಿಫಲವಾದರೆ ವಿಚಾರಣಾ ನ್ಯಾಯಾಲಯವು ತೀರ್ಪಿನ ಸಾಲಗಾರರ ಪರವಾಗಿ ಕ್ರಯಪತ್ರ ನೋಂದಾಯಿಸಲು ನ್ಯಾಯಾಲಯದ ಆಯುಕ್ತರನ್ನು ನೇಮಿಸುವ ಸ್ವಾತಂತ್ರ್ಯ ಹೊಂದಿದೆ.
* ಆಕ್ಷೇಪಾರ್ಹ ಸ್ವತ್ತಿನ ನೋಂದಣಿಗೆ ಇ-ಖಾತಾ ಅಗತ್ಯ ಎಂಬುದು ಪೂರ್ವ ಷರತ್ತಾದಲ್ಲಿ ವಿಚಾರಣಾ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಅಥವಾ ಡಿಕ್ರಿ ಹೊಂದಿರುವವರ ಅರ್ಜಿ ಆಧರಿಸಿ ಸಕ್ಷಮ ಸ್ಥಳೀಯಾಡಳಿತಕ್ಕೆ ಡಿಕ್ರಿ ಕಾರ್ಯಗತಗೊಳಿಸಲು ಸೀಮಿತವಾಗಿ ಇ-ಖಾತಾ ನೀಡಲು ನಿರ್ದೇಶಿಸಬಹುದು.
* ಮೂಲ ಮಾಲೀಕರು/ತೀರ್ಪು ಸಾಲಗಾರರು ಅರ್ಜಿ ಸಲ್ಲಿಸಿಲ್ಲ ಎಂದು ಸಕ್ಷಮ ಸ್ಥಳೀಯಾಡಳಿತವು ಇ-ಖಾತಾ ನೀಡದೇ ಇರುವಂತಿಲ್ಲ. ಅಂಥ ಪ್ರಕರಣಗಳಲ್ಲಿ ಮೂಲ ಮಾಲೀಕರು/ತೀರ್ಪು ಸಾಲಗಾರರ ಹೆಸರಿನಲ್ಲಿ ಇ-ಖಾತಾ ನೀಡಬಹುದು ಅಥವಾ ತೀರ್ಪು ಸಾಲಗಾರರನ್ನು ಪ್ರತಿನಿಧಿಸಿರುವ ನ್ಯಾಯಾಲಯದ ಆಯುಕ್ತರ ಹೆಸರಿನಲ್ಲಿ ಆದೇಶ ಕಾರ್ಯಗತಗೊಳಿಸಲು ಇ-ಖಾತಾ ನೀಡಬಹುದು.
* ಸಂಬಂಧಿತ ಆಸ್ತಿಗೆ ಸಂಬಂಧಿಸಿದಂತೆ ಆಸ್ತಿ ತೆರಿಗೆ ಅಥವಾ ಶಾಸನಬದ್ಧ ಬಾಕಿ ಇದ್ದರೆ ಅದನ್ನು ಡಿಕ್ರಿ ಪಡೆದುಕೊಂಡಿರುವವರಿಂದ ವಸೂಲಿ ಮಾಡಬೇಕೇ ಹೊರತು ತೀರ್ಪಿನ ಸಾಲಗಾರರಿಗೆ ಅದನ್ನು ಪಾವತಿಸಲು ನಿರ್ದೇಶಿಸುವಂತಿಲ್ಲ.
* ಡಿಕ್ರಿ ಹೊಂದಿರುವವರು ಬಾಕಿ ಪಾವತಿಸಿದ ಬಳಿಕ ಇ-ಖಾತಾ ಅನ್ನು ಅರ್ಜಿ ಸಲ್ಲಿಸಿದ 2 ತಿಂಗಳಲ್ಲಿ ಒದಗಿಸಬೇಕು.
* ಬಾಕಿ ಪಾವತಿಸಿದ ಮೊತ್ತ ಗಣನೀಯವಾಗಿದ್ದಾಗ ಡಿಕ್ರಿ ಆದೇಶ ಪಡೆದಿರುವ ವ್ಯಕ್ತಿಯು ಸೂಕ್ತ ಪ್ರಕ್ರಿಯೆಯ ಮೂಲಕ ತೀರ್ಪಿನ ಸಾಲಗಾರರ ಕಡೆಯಿಂದ ಅದನ್ನು ವಸೂಲಿ ಮಾಡಿಕೊಳ್ಳಬಹುದು.
* ಇ-ಖಾತಾ ಒದಗಿಸಿದ ಮೇಲೆ ಉಪ ನೋಂದಣಾಧಿಕಾರಿಯು ನ್ಯಾಯಾಲಯದ ಆಯುಕ್ತರು ಮಾಡಲು ಮುಂದಾಗುವ ಕ್ರಯಪತ್ರ ನೋಂದಾಯಿಸಲು ನಿರಾಕರಿಸುವಂತಿಲ್ಲ.
* ತೀರ್ಪಿನ ಸಾಲಗಾರರು ಮಾಡಿಕೊಡುವಾಗ ಪರಿಗಣಿಸುವಂತೆಯೇ ವಿಚಾರಣಾ ನ್ಯಾಯಾಲಯದ ಆದೇಶದ ಪ್ರಕಾರ ನ್ಯಾಯಾಲಯದ ಆಯುಕ್ತರು ಮಾಡಿಕೊಡಲು ಮುಂದಾಗುವ ಕ್ರಯಪತ್ರವನ್ನು ಪರಿಗಣಿಸಬೇಕು. ತೀರ್ಪಿನ ಸಾಲಗಾರರ ಖುದ್ದು ಹಾಜರಾತಿ ಅಥವಾ ಒಪ್ಪಿಗೆಗೆ ಆಗ್ರಹಿಸಬಾರದು.
* ಎಲ್ಲ ಪ್ರಾಧಿಕಾರಗಳು ತಮ್ಮ ಪಾತ್ರವು ಡಿಕ್ರಿ ಕಾರ್ಯಗತಗೊಳಿಸುವುದಕ್ಕೆ ಅನುಗುಣವಾಗಿ ನಡೆಯುವುದೇ ವಿನಃ ಕಾನೂನು ಪ್ರಕಾರ ನಿರ್ಧಾರವಾಗಿರುವುದನ್ನು ನಿಷ್ಪಲಗೊಳಿಸುವುದಲ್ಲ ಎಂಬುದನ್ನು ಗಮನದಲ್ಲಿಡಬೇಕು.






