ಪೇಪರ್ ಖಾತಾಗಳ ಆಧಾರದಲ್ಲಿ ಆಗುತ್ತಿರುವ ನಕಲಿ ನೋಂದಣಿಗಳನ್ನು ತಡೆಗಟ್ಟಲು ಇ-ಖಾತಾ ಕಡ್ಡಾಯ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಪೇಪರ್ ಖಾತಾಗಳ ಆಧಾರದಲ್ಲಿ ಆಗುತ್ತಿರುವ ನಕಲಿ ನೋಂದಣಿಗಳನ್ನು ತಡೆಗಟ್ಟಲು ಇ-ಖಾತಾ ಕಡ್ಡಾಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಬಳಸಲಾಗುವ ಜಮೀನನನ್ನು ಇ-ಸ್ವತ್ತು ಎಂದು ಕರೆದರೆ ನಗರ ಭಾಗರದಲ್ಲಿ ಇ-ಆಸ್ತಿ ಎನ್ನಲಾಗುತ್ತದೆ. ಈ ತಿಂಗಳಿನಿಂದ ನೋಂದಣಿ ಪ್ರಕ್ರಿಯೆಗೆ ಇ-ಖಾತಾ ಕಡ್ಡಾಯ ಎಂದು 12 ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಮುಂದಿನ ವಾರದಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇ-ಖಾತಾ ಕಡ್ಡಾಯಗೊಳಿಸಲಾಗುವುದು ಎಂದರು.
ನಾನು ಗ್ರಾಮೀಣ ಹಾಗೂ ನಗರ ಭಾಗರ ಜನರನ್ನೂ ಮನವಿ ಮಾಡಿಕೊಳ್ಳುತ್ತೇನೆ. ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕು ಎಂದರೆ ತತಕ್ಷಣ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗೆ ಹೋಗಿ ಇ-ಖಾತಾ ಪಡೆದುಕೊಳ್ಳಬೇಕು. ಇದರ ಸಹಾಯದಿಂದ ಮಾತ್ರ ನಕಲಿ ನೊಂದಣಿ ತಡೆಯುವುದು ಸಾಧ್ಯ ಎಂದು ಕೃಷ್ಣ ಬೈರೇಗೌಡ ಮನವಿ ಮಾಡಿದರು.
ಶೇ.81.74ರಷ್ಟು ಆಧಾರ್ ಸೀಡಿಂಗ್: ರಾಜ್ಯಾದ್ಯಂತ ಈವರೆಗೆ ಶೇ.81.74ರಷ್ಟು ಆಧಾರ್ ಸೀಡಿಂಗ್ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ರಾಜ್ಯಾದ್ಯಂತ 4,09,87,831ರಷ್ಟು ಜಮೀನುಗಳ ಆಧಾರ್ ಸೀಡಿಂಗ್ ಮಾಡುವುದು ಇಲಾಖೆಯ ಗುರಿ. ಈ ಪೈಕಿ ಸುಮಾರು 61 ಲಕ್ಷ ಜಮೀನುಗಳು ಕೃಷಿಯೇತರ ಚಟುವಟಿಕೆಗೆ ಉಪಯೋಗವಾಗುತ್ತಿದೆ. ಇದನ್ನು ಆಧಾರ್ ಸೀಡಿಂಗ್ ಮಾಡುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ನಿವೇಶನಗಳು ಇರುತ್ತದೆ. ನಾವು ಕೃಷಿ ಭೂಮಿಯಲ್ಲಿ ಮಾತ್ರ ಸೀಡಿಂಗ್ ಮಾಡಲು ಸಾಧ್ಯ. ಈವರೆಗೆ 2.15 ಕೋಟಿ ಜಮೀನುಗಳಿಗೆ ಆಧಾರ್ ಅಥೆಂಟಿಫಿಕೇಷನ್ ಕೆಲಸ ಮುಗಿಸಲಾಗಿದ್ದು, ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 81.74 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.
ರಾಜ್ಯಾದ್ಯಂತ 48,16,813 ಜಮೀನುಗಳ ಮಾಲಕರು ನಿಧನರಾಗಿದ್ದಾರೆ. ಆದರೆ, ಅವರ ಹೆಸರಲ್ಲೇ ಪಹಣಿ ಮುಂದುವರೆಯುತ್ತಿದೆ. ಈ ಎಲ್ಲರಿಗೂ ಶೀಘ್ರದಲ್ಲಿ ಫವತಿ ಖಾತೆ ಆಂದೋಲನದ ಅಡಿಯಲ್ಲಿ ಖಾತೆ ಬದಲಿಸಿಕೊಡಲಾಗುವುದು.
-ಕೃಷ್ಣ ಬೈರೇಗೌಡ, ಕಂದಾಯ ಸಚಿವ.







