ರೈತರೇ ಗಮನಿಸಿ; ‘ಫ್ರೂಟ್ಸ್’ ತಂತ್ರಾಂಶದಲ್ಲಿ ಇ-ಕೆವೈಸಿ, ಡಿಜಿಟಲ್ ಸಮ್ಮತಿ ಕಡ್ಡಾಯ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದ ರೈತರ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ‘ಫ್ರೂಟ್ಸ್' ತಂತ್ರಾಂಶದಲ್ಲಿ ನೋಂದಾಯಿತರಾಗಿರುವ ಎಲ್ಲ ರೈತರು ಇ-ಕೆವೈಸಿ ಮಾಡಿಸುವುದು ಹಾಗೂ ಡಿಜಿಟಲ್ ಸಹಮತಿ (Digital Consent) ನೀಡುವುದನ್ನು ಸರಕಾರ ಕಡ್ಡಾಯಗೊಳಿಸಿದೆ.
ಭಾರತ ಸರಕಾರದ ‘ಡಿಜಿಟಲ್ ಅಗ್ರಿ ಮಿಷನ್' ಅಡಿಯಲ್ಲಿ ರಾಜ್ಯ ರೈತ ನೋಂದಣಿ ಸ್ಥಾಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಮಂಗಳವಾರ ಸೂಚನೆ ನೀಡಿದ್ದಾರೆ.
ಕೇಂದ್ರ ಸರಕಾರದ ಮಾನದಂಡಗಳಂತೆ ರಾಜ್ಯದ ಎಲ್ಲ ಭೂ ಹಿಡುವಳಿದಾರ ರೈತರ ವಿವರಗಳನ್ನು ಒಳಗೊಂಡ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸುವುದು ಯೋಜನೆಯ ಗುರಿಯಾಗಿದೆ. ಈ ಯೋಜನೆಗಾಗಿ ಕರ್ನಾಟಕ ರಾಜ್ಯವು ವಿಶೇಷ ಕೇಂದ್ರ ನೆರವು ಕೋರಿ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಿದೆ.
ಫ್ರ್ರೂಟ್ಸ್ ತಂತ್ರಾಂಶದಲ್ಲಿ ಈಗಾಗಲೇ 1 ಕೋಟಿಗೂ ಹೆಚ್ಚು ರೈತರು ಭೂ ಹಿಡುವಳಿ ವಿವರಗಳೊಂದಿಗೆ ನೋಂದಾಯಿಸಿಕೊಂಡಿದ್ದು, ಅವರಲ್ಲಿ ಸುಮಾರು 71ಲಕ್ಷಕ್ಕೂ ಹೆಚ್ಚು ರೈತರು ಭೂ ಹಿಡುವಳಿಗಳನ್ನು ಹೊಂದಿದ್ದಾರೆ. ಈಗ ಇವರೆಲ್ಲರೂ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಫ್ರೂಟ್ಸ್ ತಂತ್ರಾಂಶದ ವ್ಯಾಪ್ತಿಗೆ ಬರುವ ಕಂದಾಯ, ಕೃಷಿ, ತೋಟಗಾರಿಕೆ, ರೇಶ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಸಹಕಾರ ಇಲಾಖೆಗಳ ಲಾಗಿನ್ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಇದುವರೆಗೂ ಪಿಎಂ-ಕಿಸಾನ್ ಯೋಜನೆಯ ಸುಮಾರು 4ಲಕ್ಷ ಫಲಾನುಭವಿಗಳ ಇ-ಕೆವೈಸಿ ಇನ್ನೂ ಬಾಕಿ ಇದ್ದು, ಅವರೆಲ್ಲರ ಕೆವೈಸಿಯನ್ನು ಪೂರ್ಣಗೊಳಿಸುವ ಸಲುವಾಗಿ, ರೈತರಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ನಿಗದಿತ ಗುರಿಯನ್ನು ತಲುಪಲು ಎಲ್ಲ ಜಿಲ್ಲಾ ಮತ್ತು ಇಲಾಖಾ ಮಟ್ಟದ ಅಧಿಕಾರಿಗಳಿಗೆ ಶಾಲಿನಿ ರಜನೀಶ್ ನಿರ್ದೇಶನ ನೀಡಿದ್ದಾರೆ.






