ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡರ ಬೆಂಗಳೂರು ನಿವಾಸದ ಮೇಲೆ ಈಡಿ ದಾಳಿ; ಆಸ್ತಿ ಮುಟ್ಟುಗೋಲು

ಕೋಲಾರ: ಕೋಲಾರ ಜಿಲ್ಲಾ ಹಾಲು ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಬೆಂಗಳೂರು ನಿವಾಸದ ಮೇಲೆ ಈಡಿ ದಾಳಿ ನಡೆಸಿದ್ದು, ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ 3ನೇ ಬಾರಿಗೆ ಆಯ್ಕೆ ಆಗಿರುವ ಕೆ.ವೈ.ನಂಜೇಗೌಡರ ಈ ಹಿಂದಿನ ಆಡಳಿತ ಅವಧಿಯಲ್ಲಿ ಒಕ್ಕೂಟದ ನೇಮಕಾತಿಯಲ್ಲಿ ಬಾರಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು.
2023ರ ಡಿಸೆಂಬರ್ ತಿಂಗಳಲ್ಲಿ ಕೋಮುಲ್ ನೇಮಕಾತಿಗಾಗಿ ಸುಮಾರು 320 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಅವರಲ್ಲಿ 75 ಅಭ್ಯರ್ಥಿಗಳ ಆಯ್ಕೆಯನ್ನು ಮಾಡಿ, ಫಲಿತಾಂಶ ಪ್ರಕಟಿಸದೆ ಎಲ್ಲಾ ಅಭ್ಯರ್ಥಿಗಳನ್ನು ತರಬೇತಿಗೆ ಕಳುಹಿಸಲಾಗಿತ್ತು.
ನೇಮಕಾತಿ ಪ್ರಕ್ರಿಯೆಗೆ ಮಂಗಳೂರು ವಿಶ್ವವಿದ್ಯಾಲಯ ಲಿಖಿತ ಪರೀಕ್ಷೆ ನಡೆಸಿತ್ತು, ಉತ್ತರ ಪತ್ರಿಕೆಗಳನ್ನು ತಿದ್ದಿ ಅಕ್ರಮ ಎಸಗಿರುವ ಆರೋಪದ ಬೆನ್ನಲ್ಲೇ 75 ಅಭ್ಯರ್ಥಿಗಳ ಆಯ್ಕೆ ಫಲಿತಾಂಶ ಪ್ರಕಟಿಸದೆ ನೇರವಾಗಿ ತರಬೇತಿಗೆ ಕಳುಹಿಸಲಾಗಿದ್ದು ರಾಜ್ಯದಲ್ಲಿ ಬಹಳ ದೊಡ್ಡ ಚರ್ಚೆಗೆ ಒಳಗಾಗಿತ್ತು.
ಈ ಹಿನ್ನೆಲೆಯಲ್ಲಿ ನಡೆದ ಸಾರ್ವಜನಿಕ ಚರ್ಚೆಗಳ ಪರಿಣಾಮವಾಗಿ 2024ರ ಜನವರಿ ತಿಂಗಳಲ್ಲಿ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಆವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು.
ನೇಮಕಾತಿಯಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರತಿಯೊಬ್ಬರೂ ತಲಾ ರೂ. 30 ಲಕ್ಷ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ, ಈ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಈಡಿ ತಿಳಿಸಿತ್ತು. ಇದೀಗ ಈಡಿ ನಂಜೇಗೌಡರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈಡಿ ಬೆಂಗಳೂರು ವಲಯ ಈ ಆಸ್ತಿ ಜಪ್ತಿ ಮಾಡಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಕೆ.ವೈ.ನಂಜೇಗೌಡ ಮತ್ತು ಇತರರಿಗೆ ಸೇರಿದ 1.32 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಈಡಿ ಹೇಳಿದೆ.







