ವಂಚನೆ ಪ್ರಕರಣ: ಐಶ್ವರ್ಯ ಗೌಡ ಸಹಿತ 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಈಡಿ

ಐಶ್ವರ್ಯ ಗೌಡ
ಬೆಂಗಳೂರು: ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡ ಸಹಿತ ಇತರೆ 18 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಈಡಿ) ಮಂಗಳವಾರ ತಿಳಿಸಿದೆ.
ಬೆಂಗಳೂರಿನ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ನ್ಯಾಯಾಲಯಕ್ಕೆ ಜೂನ್ 21ರಂದು ಪ್ರಾಸಿಕ್ಯೂಷನ್ ದೂರು ದಾಖಲಿಸಲಾಗಿದೆ ಎಂದು ಈಡಿ ತಿಳಿಸಿದೆ.
ಐಶ್ವರ್ಯ ಗೌಡ ಮತ್ತು ಇತರೆ ಆರೋಪಿಗಳು ಹಲವು ವ್ಯಕ್ತಿಗಳಿಂದ ಚಿನ್ನಾಭರಣ ಹಾಗೂ ನಗದು ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ಪಡೆದು ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದಿರುವುದಾಗಿ ಈ.ಡಿ. ಪ್ರಕಟನೆಯಲ್ಲಿ ಹೇಳಿದೆ.
ಇತ್ತೀಚೆಗೆ ಈ.ಡಿ. ಸಂಸ್ಥೆಯು ಇದೇ ಪ್ರಕರಣದಲ್ಲಿ ಐಶ್ವರ್ಯ ಗೌಡ ದಂಪತಿಗೆ ಸಂಬಂಧಿಸಿದ 2.01 ಕೋಟಿ ರೂ. ಮೌಲ್ಯದ ಫ್ಲ್ಯಾಟ್, ನಿವೇಶನಗಳು ಹಾಗೂ ನಿರ್ಮಾಣವಾಗಿರುವ ಕಟ್ಟಡ ಹಾಗೂ 1.97 ಕೋಟಿ ರೂ. ಮೊತ್ತದ ಹಣ ಹಾಗೂ ವಾಹನಗಳು ಒಳಗೊಂಡಂತೆ ಒಟ್ಟು 3.98 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.