ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಕಾಂಗ್ರೆಸ್ ನಾಯಕಿ ಕುಸುಮಾ ಮನೆ ಮೇಲೆ ಈಡಿ ದಾಳಿ

ಕೆ.ಸಿ.ವೀರೇಂದ್ರ ಪಪ್ಪಿ / ಕುಸುಮಾ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರ ಮನೆ, ಕಂಪೆನಿಗಳ ಹಾಗೂ ಕಾಂಗ್ರೆಸ್ ನಾಯಕಿ ಕುಸುಮಾ ಅವರ ನಿವಾಸದ ಮೇಲೆ ಶುಕ್ರವಾರದಂದು ದಾಳಿ ನಡೆಸಿದ್ದಾರೆ. ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ, ಗೋವಾ ಸೇರಿದಂತೆ 17 ಕಡೆಗಳಲ್ಲಿ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ವೀರೇಂದ್ರ ಪಪ್ಪಿ ಮಾಲಕತ್ವದ ಹಲವು ಕಂಪೆನಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿರುವ ಈಡಿ ಅಧಿಕಾರಿಗಳು ರತ್ನಾ ಗೇಮಿಂಗ್ ಸಲ್ಯೂಷನ್ಸ್, ರತ್ನಾ ಗೋಲ್ಡ್ ಕೆಂಪನಿ, ರತ್ನಾ ಮಲ್ಟಿಸ್ಟೋರ್ಸ್ ಕೆಂಪನಿ, ಪಪ್ಪಿ ಟೆಕ್ನಾಲಜೀಸ್ ಕೆಂಪನಿ, ಪಪ್ಪಿ ಟೂರ್ಸ್ ಅಂಡ್ ಟ್ರಾವೆಲ್ಸ್ ಹಾಗೂ ಪಪ್ಪಿ ಸ್ಪೇರ್ಬಾಕ್ಸ್ ಕೆಂಪನಿಗಳಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಹಾಗೂ ಚಳ್ಳಕೆರೆಯಲ್ಲಿ ಗೇಮಿಂಗ್ ಆಪ್ ಸಂಬಂಧ ದಾಖಲಾಗಿದ್ದ ದೂರುಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಸಂತನಗರದಲ್ಲಿರುವ ಶಾಸಕ ವೀರೇಂದ್ರ ಅವರ ಖಾಸಗಿ ಅಪಾರ್ಟ್ಮೆಂಟ್ ಹಾಗೂ ಸಹಕಾರ ನಗರದಲ್ಲಿರುವ ನಿವಾಸಗಳ ಮೇಲೆ ದಾಳಿ ಇಡಿ ಅಧಿಕಾರಿಗಳು ಮಾಡಿದ್ದಾರೆ. ಚಳ್ಳಕೆರೆಯಲ್ಲಿರುವ ಶಾಸಕರ ನಿವಾಸ ಸೇರಿದಂತೆ ಅವರ ಸಹೋದರರಾದ ಕೆ.ಸಿ. ನಾಗರಾಜ್ ಮತ್ತು ಕೆ.ಸಿ.ತಿಪ್ಪೇಸ್ವಾಮಿ ನಿವಾಸಗಳ ಮೇಲೂ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿದೆ.
ಇನ್ನು ಕಾಂಗ್ರೆಸ್ ನಾಯಕಿ ಕುಸುಮಾ ಅವರ ರಾಜರಾಜೇಶ್ವರಿ ನಗರದ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವೀರೇಂದ್ರ ಪಪ್ಪಿ ಅವರೊಂದಿಗೆ ಆರ್ಥಿಕ ವ್ಯವಹಾರ ಹೊಂದಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.







