ಮಹಿಳೆಯರ ಡಿಜಿಟಲ್ ಸುರಕ್ಷತೆ ಮತ್ತು ನಾಯಕತ್ವ ಬಲವರ್ಧನೆಗೆ ಪರಿಣಾಮಕಾರಿ ಕ್ರಮ ಅಗತ್ಯ: ಡಾ.ಸುಧಾ ಯಾದವ್

ಬೆಂಗಳೂರು : ಡಿಜಿಟಲ್ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮಹಿಳೆಯರು ಕೇವಲ ಬಳಕೆದಾರರಾಗದೆ, ನಾಯಕಿಯರು, ಆವಿಷ್ಕಾ ರಕರು ಹಾಗೂ ನಿರ್ಣಯ ಕೈಗೊಳ್ಳುವವರಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಸುರಕ್ಷಿತ ಡಿಜಿಟಲ್ ವಾತಾವರಣ, ಬಲಿಷ್ಠ ಕಾನೂನು ರಕ್ಷಣೆ ಮತ್ತು ಪರಿಣಾಮಕಾರಿ ಮಾರ್ಗದರ್ಶನ ವ್ಯವಸ್ಥೆ ಅಗತ್ಯ ಎಂದು ರಾಜ್ಯಪಾಲರಾದ ಡಾ. ಸುಧಾ ಯಾದವ್ ಪ್ರತಿಪಾದಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಎರಡು ದಿನಗಳ ಕಾಮನ್‍ವೆಲ್ತ್ ಮಹಿಳಾ ಸಂಸದೀಯ ಪ್ರತಿನಿಧಿಗಳ (ಸಿಡಬ್ಲ್ಯೂಪಿ) ಭಾರತ ವಲಯದ ಪ್ರಥಮ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಡೀಪ್‍ಫೇಕ್‍ಗಳು, ಸುಳ್ಳು ಮಾಹಿತಿ ಪ್ರಸಾರ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಕಿರುಕುಳಗಳು ಗಂಭೀರ ಸವಾಲಾಗಿ ಪರಿಣಮಿಸಿವೆ. ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವ ಮಹಿಳೆಯರ ಧ್ವನಿಯನ್ನು ಅಡಗಿಸಲು ಮತ್ತು ಅವರ ನಾಯಕತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಂದಿಸಲು ಇಂತಹ ತಂತ್ರಜ್ಞಾನಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದರು.
ಸಾಮಾಜಿಕ ಮಾಧ್ಯಮ ವೇದಿಕೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವುದು, ಕಾನೂನು ಮತ್ತು ಸಾಂಸ್ಥಿಕ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಿಸುವುದು ಅತ್ಯಗತ್ಯ. ಅನುಭವಿ ಮಹಿಳಾ ಜನಪ್ರತಿನಿಧಿಗಳು ಹೊಸದಾಗಿ ಆಯ್ಕೆಯಾದ ಮಹಿಳೆಯರಿಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಯೂ ರೂಪುಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಹಿಳೆಯರು ಸುರಕ್ಷಿತವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಸಮಗ್ರ ಹಾಗೂ ಪ್ರಾತಿನಿಧಿಕವಾಗಲು ಸಾಧ್ಯ. ಎರಡು ದಿನಗಳ ಸಮಾವೇಶದಲ್ಲಿ ವ್ಯಕ್ತವಾದ ವಿಚಾರಗಳು ಭವಿಷ್ಯದಲ್ಲಿ ಪರಿಣಾಮಕಾರಿ ನೀತಿ ನಿರ್ಧಾರಗಳಾಗಿ ರೂಪುಗೊಳ್ಳಬೇಕು ಎಂದು ರಾಜ್ಯಪಾಲರು ಆಶಿಸಿದರು.
ಮಹಿಳೆಯರ ಘನತೆ ಮತ್ತು ಗೌಪ್ಯತೆ ರಕ್ಷಣೆ ಅತ್ಯಗತ್ಯ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್, ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವುದರ ಜೊತೆಗೆ ಡಿಜಿಟಲ್ ಜಗತ್ತಿನಲ್ಲಿ ಅವರ ಗೌಪ್ಯತೆ ಮತ್ತು ಘನತೆಯನ್ನು ರಕ್ಷಿಸುವುದು ಇಂದಿನ ಪ್ರಮುಖ ಸವಾಲಾಗಿದೆ ಎಂದು ಹೇಳಿದರು.
ಸಾಮಾಜಿಕ ಮಾಧ್ಯಮಗಳ ದುರ್ಬಳಕೆ, ಸೈಬರ್ ಕಿರುಕುಳ, ಡೀಪ್‍ಫೇಕ್‍ಗಳು ಹಾಗೂ ಎಐ ಆಧಾರಿತ ದಾಳಿಗಳು ಮಹಿಳಾ ಜನಪ್ರತಿನಿಧಿಗಳ ಸಾರ್ವಜನಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಕುರಿತು ಕಾನೂನು ಅರಿವು, ಪರಿಣಾಮಕಾರಿ ಅನುಷ್ಠಾ ನ ಮತ್ತು ಸಾರ್ವಜನಿಕ ಜಾಗೃತಿ ಹೆಚ್ಚಿಸಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಭಾರತದ ಪ್ರಜಾಪ್ರಭುತ್ವ ಪರಂಪರೆ ಅತ್ಯಂತ ಪ್ರಾಚೀನವಾದುದು. ಋಗ್ವೇದದಲ್ಲಿನ ಸಾಮೂಹಿಕ ಚಿಂತನೆ ಮತ್ತು ಒಮ್ಮತದ ಆಶಯಗಳು ಹಾಗೂ ಕರ್ನಾಟಕದ 12ನೇ ಶತಮಾನದ ಅನುಭವ ಮಂಟಪದ ವಿಚಾರ ವಿನಿಮಯ ಪರಂಪರೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅತ್ಯುತ್ತಮ ಉದಾಹರಣೆಗಳಾಗಿವೆ ಎಂದು ಅವರು ಸ್ಮರಿಸಿದರು.
ರಾಣಿ ಲಕ್ಷ್ಮೀಬಾಯಿ, ಬೇಗಂ ಹಝ್ರತ್ ಮಹಲ್, ಸರೋಜಿನಿ ನಾಯ್ಡು, ಅರುಣಾ ಆಸಫ್ ಅಲಿ, ಕಮಲಾದೇವಿ ಚಟ್ಟೋಪಾಧ್ಯಾಯ ಹಾಗೂ ದುರ್ಗಾಬಾಯಿ ದೇಶಮುಖ್ ಸೇರಿದಂತೆ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಿಳಾ ನಾಯಕಿಯರ ಕೊಡುಗೆಯನ್ನು ರಾಜ್ಯಸಭೆಯ ಉಪ ಸಭಾಪತಿ ಸ್ಮರಿಸಿದರು.
ನಾರಿ ಶಕ್ತಿ ವಂದನ್ ಅಧಿನಿಯಮ ಭಾರತೀಯ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ನಾಯಕತ್ವ ವಿಸ್ತರಣೆಗೆ ಮಹತ್ವದ ಹೆಜ್ಜೆಯಾಗಿದೆ. ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನಮಂಡಲಗಳು ಮತ್ತು ಸಂಸತ್ತಿನವರೆಗೆ ಮಹಿಳೆಯರು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಲು ಇದು ಅವಕಾಶ ಕಲ್ಪಿಸಲಿದೆ ಎಂದು ಅವರು ತಿಳಿಸಿದರು.
ಎರಡು ದಿನಗಳ ಸಮಾವೇಶದಲ್ಲಿ ಮೊದಲ ದಿನ 17 ಮಂದಿ ಸೇರಿದಂತೆ ಒಟ್ಟು 25 ಮಂದಿ ವಿವಿಧ ಅಧಿವೇಶನಗಳಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಅವರಲ್ಲಿ ಸಂಸದರು, ವಿವಿಧ ರಾಜ್ಯಗಳ ಶಾಸನಕಾರರು ಹಾಗೂ ವಿಷಯ ತಜ್ಞರು ಭಾಗವಹಿಸಿದ್ದು, ಚರ್ಚೆಗಳು ಅತ್ಯಂತ ಫಲಪ್ರದವಾಗಿವೆ ಎಂದು ಹರಿವಂಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಮನ್‍ವೆಲ್ತ್ ಮಹಿಳಾ ಸಂಸದೀಯ ಪ್ರತಿನಿಧಿಗಳ ಭಾರತ ವಲಯದ ಅಧ್ಯಕ್ಷೆ ಡಾ.ಡಿ. ಪುರಂದೇಶ್ವರಿ ಮಾತನಾಡಿ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಮಾವೇಶ ಯಶಸ್ವಿಯಾಗಿದೆ. ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಡಿಜಿಟಲ್ ಸುರಕ್ಷತೆಯನ್ನು ಪ್ರತ್ಯೇಕವಾಗಿ ಪರಿಗಣಿಸಲು ಸಾಧ್ಯವಿಲ್ಲ. ತಂತ್ರಜ್ಞಾನವು ಆಡಳಿತ ಮತ್ತು ಸಾರ್ವಜನಿಕ ಸಂಪರ್ಕಕ್ಕೆ ಹೊಸ ಅವಕಾಶಗಳನ್ನು ಒದಗಿಸಿದ್ದರೂ, ಸುರಕ್ಷಿತ ವಾತಾವರಣದ ಕೊರತೆ ಮಹಿಳೆಯರ ಸಮಾನ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುತ್ತಿದೆ ಎಂದರು.
ಸೈಬರ್ ಸ್ಟಾಕಿಂಗ್, ಸಂಘಟಿತ ಟ್ರೋಲಿಂಗ್, ಆನ್‍ಲೈನ್ ಕಿರುಕುಳ, ವೈಯಕ್ತಿಕ ಮಾಹಿತಿಯ ದುರ್ಬಳಕೆ ಹಾಗೂ ಡೀಪ್‍ಫೇಕ್‍ಗಳ ಹೆಚ್ಚಳವು ಮಹಿಳಾ ನಾಯಕಿಯರ ಪ್ರತಿಷ್ಠೆ ಗೆ ಮಾತ್ರವಲ್ಲದೆ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೂ ಅಪಾಯ ತಂದೊಡ್ಡುತ್ತಿದೆ. ಈ ಸಮಸ್ಯೆಗಳಿಗೆ ಸರಕಾರ, ಶಾಸನ ಸಭೆಗಳು, ಪೊಲೀಸ್ ಇಲಾಖೆ, ತಂತ್ರಜ್ಞಾನ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳೆಯರ ಪ್ರಾತಿನಿಧ್ಯವನ್ನು ಸಂಖ್ಯಾತ್ಮಕವಾಗಿ ಹೆಚ್ಚಿಸುವುದರ ಜೊತೆಗೆ ಅವರ ಸಾಮಥ್ರ್ಯ ಮತ್ತು ನಿರ್ಣಯ ಕೈಗೊಳ್ಳುವ ಪ್ರಭಾವವನ್ನೂ ಹೆಚ್ಚಿಸಬೇಕು. ಮೊದಲ ಬಾರಿಗೆ ಆಯ್ಕೆಯಾಗುವ ಮಹಿಳಾ ಜನಪ್ರತಿನಿಧಿಗಳಿಗೆ ಔಪಚಾರಿಕ ಹಾಗೂ ಅನೌಪಚಾರಿಕ ಮಾರ್ಗದರ್ಶನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕೆಂದು ಪುರಂದೇಶ್ವರಿ ಕರೆ ನೀಡಿದರು.
ಮಹಿಳೆಯರ ಧ್ವನಿ ಮತ್ತು ನಿರ್ಣಯ ಕೈಗೊಳ್ಳುವ ಶಕ್ತಿ ಹೆಚ್ಚಬೇಕು: ಸಲೀಂ ಅಹ್ಮದ್
"ಮಹಿಳಾ ಸಬಲೀಕರಣವೆಂದರೆ ಶಾಸನ ಸಭೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲ; ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅವರ ಧ್ವನಿ, ಪ್ರಭಾವ ಮತ್ತು ನಾಯಕತ್ವವನ್ನು ಬಲಪಡಿಸುವುದಾಗಿದೆ. ಈ ಸಮಾವೇಶದ ನಿಜವಾದ ಯಶಸ್ಸನ್ನು ಇಲ್ಲಿ ಮಾಡಿದ ಭಾಷಣಗಳು ಅಥವಾ ಚರ್ಚೆಗಳಿಂದ ಅಳೆಯುವುದಿಲ್ಲ. ಮುಂದಿನ ದಿನಗಳಲ್ಲಿ ನಾವು ಕೈಗೊಳ್ಳುವ ಕಾರ್ಯಗಳಿಂದ ಅಳೆಯಲಾಗುತ್ತದೆ. ‘ಮಹಿಳೆಯರಿಗೆ ಸುರಕ್ಷಿತ ಡಿಜಿಟಲ್ ವಾತಾವರಣ, ಹೊಸ ನಾಯಕಿಯರಿಗೆ ಪರಿಣಾಮಕಾರಿ ಮಾರ್ಗದರ್ಶನ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಮಹಿಳೆಯರ ಹೆಚ್ಚಿನ ಪ್ರಭಾವ’ ಇವು ನಮ್ಮ ಮುಂದಿನ ಸಂಕಲ್ಪಗಳಾಗಬೇಕು"






