ಜಿ. ಪಂ., ತಾ. ಪಂ. ಚುನಾವಣೆಗೆ ಆಯೋಗದ ಸಿದ್ಧತೆ

ಸಾಂದರ್ಭಿಕ ಚಿತ್ರ | PC : Image by pch.vector on Magnific
ಬೆಂಗಳೂರು : ರಾಜ್ಯದಲ್ಲಿ ಮುಂಬರಲಿರುವ ಜನವರಿಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಆಯೋಗ ನಿರ್ದೇಶನ ನೀಡಿದೆ.
ರಾಜ್ಯ ಚುನಾವಣಾ ಆಯೋಗ ಶನಿವಾರ ಹೊರಡಿಸಿರುವ ನಿರ್ದೇಶನದಂತೆ, ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಸಹಾಯಕ ಆಯುಕ್ತರ ಹುದ್ದೆಯ ಅಥವಾ ಅದಕ್ಕೆ ಸಮಾನ ಶ್ರೇಣಿಯ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳಾಗಿ ನೇಮಿಸಬೇಕು. ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ತಹಸೀಲ್ದಾರ್ ಅಥವಾ ಆ ಹುದ್ದೆಗೆ ಸಮಾನ ಶ್ರೇಣಿಯ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳಾಗಿ ನೇಮಿಸಲು ನಿರ್ದೇಶನ ನೀಡಲಾಗಿದೆ.
ಜಿಲ್ಲಾಧಿಕಾರಿಗಳು ಪ್ರಾಥಮಿಕ ಸಭೆಗಳನ್ನು ನಡೆಸಿ, ನೇಮಕಗೊಳ್ಳುವ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಅಗತ್ಯ ತರಬೇತಿ ನೀಡಬೇಕು. ನೇಮಕಾತಿಗೆ ಸಂಬಂಧಿಸಿದ ಪ್ರಸ್ತಾವನೆ ಹಾಗೂ ಆರ್ ಒ-ಎಆರ್ ಒ ಪಟ್ಟಿಯನ್ನು ನ.16ರೊಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳ ನಡವಳಿಕೆ) ನಿಯಮಗಳು, 1993ರ ನಿಯಮ 6ರನ್ವಯ ಸೂಕ್ತ ಅಧಿಕಾರಿಗಳನ್ನು ಗುರುತಿಸಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಜಿಲ್ಲಾ ಪಂಚಾಯಿತಿ ಚುನಾವಣೆಗೆ ಪ್ರತಿ ತಾಲೂಕಿಗೆ ಒಬ್ಬ ಸಹಾಯಕ ಆಯುಕ್ತರ ಶ್ರೇಣಿಯ ಅಧಿಕಾರಿಯನ್ನು ಆರ್ ಒಗಳನ್ನಾಗಿ ನೇಮಿಸಬೇಕು. 10ಕ್ಕಿಂತ ಹೆಚ್ಚು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿರುವ ತಾಲೂಕುಗಳಲ್ಲಿ ಅಗತ್ಯವಿದ್ದರೆ ಇಬ್ಬರು ಆರ್ ಒಗಳನ್ನು ನೇಮಿಸಬಹುದಾಗಿದೆ. ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್ ಹೊರತುಪಡಿಸಿ, ತಹಸೀಲ್ದಾರ್ ಶ್ರೇಣಿಯ ಅಧಿಕಾರಿಗಳನ್ನು ಎಆರ್ ಒಗಳಾಗಿ ನೇಮಿಸಬೇಕೆಂದು ಸೂಚಿಸಲಾಗಿದೆ.
ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪ್ರತಿ 15 ಕ್ಷೇತ್ರಗಳಿಗೆ ಒಬ್ಬ ತಹಸೀಲ್ದಾರ್ ಅಥವಾ ಸಮಾನ ಶ್ರೇಣಿಯ ಅಧಿಕಾರಿಯನ್ನು ಆರ್ ಒಗಳಾಗಿ ನೇಮಿಸಬೇಕು. ಉಪ ತಹಸೀಲ್ದಾರ್ ಅಥವಾ ಸಮಾನ ಶ್ರೇಣಿಯ ಅಧಿಕಾರಿಗಳನ್ನು ಎಆರ್ ಒಗಳಾಗಿ ನಿಯೋಜಿಸಬೇಕು. ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಿಂದಿನ ಚುನಾವಣಾ ಅನುಭವ ಇರುವಂತೆ ನೋಡಿಕೊಳ್ಳಬೇಕು ಎಂದು ಆಯೋಗ ಸೂಚಿಸಿದೆ.
ಚುನಾವಣಾ ಸಿದ್ಧತೆಯ ಆರಂಭದಿಂದ ಮತದಾನ ಮತ್ತು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗೂ ತರಬೇತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳನ್ನು ಆಯೋಗದ ಪೂರ್ವಾನುಮತಿ ಇಲ್ಲದೆ ಬದಲಾಯಿಸಬಾರದು. ಅನಿವಾರ್ಯ ಸಂದರ್ಭದಲ್ಲಿ ಆಯೋಗದ ಅನುಮತಿ ಪಡೆದ ಬಳಿಕವೇ ಬದಲಾವಣೆ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.






