ಮಂಗಳೂರು ವಿಭಾಗಕ್ಕೆ ವಿದ್ಯುತ್ ಚಾಲಿತ ಬಸ್ ಹಸ್ತಾಂತರ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಕೆಎಸ್ಸಾರ್ಟಿಸಿಗೆ 350 ವಿದ್ಯುತ್ ಚಾಲಿತ ಬಸ್‍ಗಳು ಹಂಚಿಕೆಯಾಗಿದ್ದು, ಆ ಪೈಕಿ ಮಂಗಳೂರು ವಿಭಾಗಕ್ಕೆ 12 ಮೀಟರ್ ಮಾದರಿಯ ವಿದ್ಯುತ್ ಚಾಲಿತ ಬಸ್‍ಗಳನ್ನು ಹಸ್ತಾಂತರ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಭಾಗೀರಥಿ ಮುರುಳ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2025-26ನೆ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 5 ಐರಾವತ ಕ್ಲಬ್ ಕ್ಲಾಸ್, 2.0 ಮಾದರಿಯ 2 ಸೀಟರ್ ಹಾಗೂ ಅಂಬಾರಿ ಉತ್ಸವ ಮಾದರಿಯ 3 ಸ್ಲೀಪರ್ ಹೊಸ ಹವಾ ನಿಯಂತ್ರಿತ ವೋಲ್ವೋ ಮಲ್ಟಿ ಆಕ್ಸಲ್ ಬಸ್‍ಗಳನ್ನು ಒದಗಿಸಲಾಗಿದೆ ಎಂದರು.
ಸಾರಿಗೆ ನಿಗಮಗಳಿಗೆ 2025-26ನೇ ಸಾಲಿನ ಆಯವ್ಯಯದಲ್ಲಿ 2000 ಡೀಸೆಲ್ ಬಸ್‍ಗಳನ್ನು ಖರೀದಿಸುವ ಘೋಷಣೆ ಮಾಡಲಾಗಿದ್ದು, ಈ ಬಸ್‍ಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 900 ಬಸ್‍ಗಳನ್ನು ಹಂಚಿಕೆ ಮಾಡಲಾಗಿದೆ. ಜತೆಗೆ, ಬಸ್‍ಗಳ ಖರೀದಿಗೆ ಅವಶ್ಯವಿರುವ ಅನುದಾನ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ.
ಹಾಗಾಗಿ, ಬಸ್‍ಗಳನ್ನು ಖರೀದಿಸಿದ ನಂತರ ಅಗತ್ಯತೆಯನ್ನು ಪರಿಗಣಿಸಿ ಸುಳ್ಯ ಘಟಕಕ್ಕೆ ಆದ್ಯತೆ ಮೇರೆಗೆ ಬಸ್‍ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.







