ತುಳಿತಕ್ಕೊಳಗಾದವರ ಸಬಲೀಕರಣವೇ ನ್ಯಾಯಾಂಗದ ಮುಖ್ಯ ಗುರಿ: ಸಿಜೆಐ ಡಿ.ವೈ.ಚಂದ್ರಚೂಡ್

ಬೆಂಗಳೂರು: ತಾರತಮ್ಯವನ್ನು ತೊಡೆದು ಹಾಕಿ, ಸಮಾನ ಅವಕಾಶ ಕಲ್ಪಿಸುವುದು ಮತ್ತು ತುಳಿತಕ್ಕೊಳಗಾದವರ ಸಬಲೀಕರಣಗೊಳಿಸುವುದು ನ್ಯಾಯಾಂಗ ವ್ಯವಸ್ಥೆಯ ಮುಖ್ಯ ಗುರಿಯಾಗಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿವಂಗತ ನ್ಯಾಯಮೂರ್ತಿ ಇ.ಎಸ್. ವೆಂಟಕರಾಮಯ್ಯ ಅವರ ಸ್ಮರಣಾರ್ಥ ಶತಮಾನೋತ್ಸವ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಖಾಸಗಿ ವಲಯದಲ್ಲಿ ನಿಜವಾದ ಸಮಾನತೆಯನ್ನು ಸಾಧಿಸಲು ವಾಸ್ತವಗಳ ಹಿನ್ನೆಲೆ ಅರ್ಥಮಾಡಿಕೊಳ್ಳಬೇಕಿದೆ. ಈ ಮೂಲಕ ಅಸಮತೋಲನವನ್ನು ನಿವಾರಿಸಬೇಕಾಗಿದೆ. ಸಮಾಜದ ಶಾಂತಿ, ಸೌಹಾರ್ದತೆ ಕಾಪಾಡಲು ದೇಶದ ಸರ್ವೋಚ್ಚ ನ್ಯಾಯಾಲಯ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ ಎಂದರು.
ಸಾಮಾಜಿಕ ತಾರತಮ್ಯದ ಐತಿಹಾಸಿಕ ದೃಷ್ಟಿಕೋನ ಮತ್ತು ಕಾನೂನಿನ ನ್ಯಾಯಶಾಸ್ತ್ರದ ಬಗೆಗೆ ಸಮಗ್ರ ಅರಿವು ಹಂತ-ಹಂತವಾಗಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ಪ್ರಕ್ರಿಯೆ. ಸಮಾನತೆ ಕೇವಲ ಘೋಷಣೆಯಾಗದೆ ಕಾರ್ಯರೂಪಕ್ಕೆ ಬರಬೇಕು. ನ್ಯಾಯಾಂಗ ವ್ಯವಸ್ಥೆ ಸಮಾಜಕ್ಕೆ ದಾರಿ ದೀಪವಾಗಬೇಕು. ವ್ಯತ್ಯಾಸಗಳನ್ನು ಸರಿದೂಗಿಸಿ, ಪಕ್ಷಪಾತಗಳನ್ನು ನಿರ್ಮೂಲನೆ ಮಾಡಿ ಮತ್ತು ವಸ್ತುನಿಷ್ಠ ಸಮಾನತೆಯನ್ನು ವಿಕಸನಗೊಳ್ಳಬೇಕು ಎಂದರು.
ನಮ್ಮ ಕಾನೂನುಗಳು ಸಾರ್ವಜನಿಕ ಮತ್ತು ಖಾಸಗಿಯಾಗಿ ನಡೆಯುವ ತಾರತಮ್ಯವನ್ನು ನಿವಾರಿಸುವ ಪ್ರಬಲ ಸಾಧನಗಳಾಗಿವೆ. ಆದರೆ ಕೆಲ ಜನರಿಗೆ ಕಾನೂನು ಸುಲಭವಾಗಿ ಎಟುಕದ ವಿಚಾರವಾಗಿದೆ. ಆದುದರಿಂದ ನಮ್ಮ ವ್ಯವಸ್ಥೆಯಲ್ಲಿ ಇನ್ನೂ ತಾರತಮ್ಯ ಇದೆ ಎಂದು ಹೇಳಲು ಬೇಸರವಾಗುತ್ತದೆ. ವಿಕಲಾಂಗ ವ್ಯಕ್ತಿಗಳ ವಿಚಾರದಲ್ಲೂ ನ್ಯಾಯ ಪಡೆಯುವುದು ಕಷ್ಟಕರ ವಿಷಯವಾಗಿದೆ. ಇವೆಲ್ಲವನ್ನೂ ನೋಡಿದರೆ ಸಮಾನ ಕಾನೂನು ಮತ್ತು ಅದರ ರಕ್ಷಣೆ ನೆಡೆಯುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ ಎಂದು ಡಿ.ವೈಚಂದ್ರಚೂಡ್ ಬೇಸರ ವ್ಯಕ್ತಪಡಿಸಿದರು.
ಜಸ್ಟಿಸ್ ಇಎಸ್‍ವಿ ಅವರಿಗೆ ಗೌರವ ಸೂಚಿಸಿ ಎಲ್ಲ ಕಾನೂನು ಪಂಡಿತರು, ವಿದ್ವಾಂಸರು, ನ್ಯಾಯಮೂರ್ತಿಗಳು ಮತ್ತು ವಕೀಲರು ಬದಲಾವಣೆಯ ಪ್ರತಿಜ್ಞೆ ತೆಗೆದುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸಬೇಕು. ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಸಧೃಡವಾಗಿಸಲು ಪಣತೊಡಬೇಕು ಎಂದು ಹೇಳಿದರು.







