5 ಕೋಟಿ ರೂ.ವೆಚ್ಚದಲ್ಲಿ ರಾಯಚೂರಿನಲ್ಲಿ ಎಐ ಶ್ರೇಷ್ಠತಾ ಕೇಂದ್ರ ಸ್ಥಾಪನೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಐಐಐಟಿ ರಾಯಚೂರಿನಲ್ಲಿ ಎಐ ಶ್ರೇಷ್ಠತಾ ಕೇಂದ್ರವನ್ನು 5ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದ ಅವರು, ಐಐಎಸ್ಸಿ ಅಧೀನದಲ್ಲಿರುವ ಪ್ರತಿಷ್ಠಾನವಾದ ಎಐ ಮತ್ತು ರೋಬೋಟಿಕ್ಸ್ ತಂತ್ರಜ್ಞಾನ ಪಾರ್ಕ್, ಐಎಸ್ಆರ್ಒ, ಕಿಯೋನಿಕ್ಸ್ ಸಹಯೋಗದಲ್ಲಿ ‘ಬೆಂಗಳೂರು ರೋಬೋಟಿಕ್ಸ್ ಮತ್ತು ಎಐ ಇನ್ನೊವೇಶನ್ ಝೋನ್’ ಎಂಬ ರೋಬೋಟಿಕ್ಸ್ ಮತ್ತು ಎಐ ಕ್ಯಾಂಪಸ್ ಅನ್ನು ಸ್ಥಾಪಿಸುವುದು. ಗ್ಲೋಬಲ್ ಕೆಪಾಬಿಲಿಟಿ ಸೆಂಟರ್(ಜಿಸಿಸಿ) ನೀತಿಯಡಿಯಲ್ಲಿ 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಿಸಿಸಿ ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಉದ್ದೇಶದೊಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಹಾಗೂ 11 ಜಿಲ್ಲೆಗಳಲ್ಲಿ ತಾರಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ 6 ಹೊಸ ತಾರಾಲಯಗಳನ್ನು ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ ತಲಾ ನಾಲ್ಕು ಕೋಟಿ ರೂ.ಗಳಂತೆ ಒಟ್ಟು 24 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಮುಖ್ಯಾಂಶಗಳು:
-ಕಿಯೋನಿಕ್ಸ್ ಮೂಲಕ ಮಂಗಳೂರಿನಲ್ಲಿ ಐಟಿ ಪಾರ್ಕ್ ಅನ್ನು ಅಭಿವೃದ್ಧಿಗೊಳಿಸಿ ಜಿಸಿಸಿ ಅನ್ನು ಪ್ರೋತ್ಸಾಹ.
-ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸುವುದು.
-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪನೆ.
-ಉದ್ಯೋಗಾವಕಾಶ ಹೆಚ್ಚಿಸಲು ‘ಸೂಪರ್ 100 ಇಂಡಸ್ಟ್ರೀ-ಅಕಾಡಮಿಯಾ ಅಡಾಪ್ಷನ್ ಪ್ರೋಗ್ರಾಮ್’ ಜಾರಿಗೊಳಿಸುವುದು.
-ಕೆ–ಕಾಂಬಿನೇಟರ್ ಮೂಲಕ ನವೋದ್ಯಮಿಗಳಿಗೆ ವೇಗವರ್ಧಕ ಕಾರ್ಯಕ್ರಮವನ್ನು ಆಯೋಜಿಸುವುದು.
-ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ಉದ್ಯಮಿಗಳಿಗೆ ಇನ್ಕ್ಯೂಬ್ಯಾಷನ್ ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ‘ಲೀಪ್ ಲ್ಯಾಬ್ಸ್’ ಗಳನ್ನು ಸ್ಥಾಪಿಸಲಾಗುವುದು.
-ಐಐಐಟಿ ಬೆಂಗಳೂರು ಮತ್ತು ನಿಮ್ಹಾನ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ನರ ಶಸ್ತ್ರಚಿಕಿತ್ಸೆಗೆ ಪೂರಕವಾಗಲು ಅಡ್ವಾನ್ಸ್ಡ್ ಸರ್ಜಿಕಲ್ ಅಸಿಸ್ಟೀವ್ ರೊಬೊಟ್ಗಳನ್ನು ವಿನ್ಯಾಸಗೊಳಿಸಲು ನಾಲ್ಕು ಕೋಟಿ ರೂ.ಗಳನ್ನು ನೀಡುವುದು.
-ಬಯೋಟೆಕ್ನಾಲಜಿ ಆಧಾರಿತ ಪ್ರಯೋಗಾಲಯಗಳಿಗೆ ಸ್ಥಳಾವಕಾಶ ಕಲ್ಪಿಸಲು ಮಾನವ ತಳಿಶಾಸ್ತ್ರ ಕೇಂದ್ರದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ಮೂಲಸೌಲಭ್ಯ ಒದಗಿಸುವುದು.
-16 ಕೋಟಿ ರೂ. ಗಳ ವೆಚ್ಚದಲ್ಲಿ ಎರಡು ಎಐ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವುದು.







