ರಾಜೀನಾಮೆ ನೀಡಲು ನಾನೇನು ತಪ್ಪು ಮಾಡಿದ್ದೇನೆ : ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ

ಆರ್.ಬಿ.ತಿಮ್ಮಾಪುರ/ಆರ್.ಅಶೋಕ್
ಬೆಂಗಳೂರು : ‘ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶದಿಂದಲೇ ಯಾವುದೇ ಸಾಕ್ಷಿ, ಆಧಾರಗಳಿಲ್ಲದೆ ಆರೋಪ ಮಾಡುವುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದೂ ಇಲ್ಲ. ರಾಜೀನಾಮೆ ನೀಡಲು ನಾನೇನು ತಪ್ಪು ಮಾಡಿದ್ದೇನೆ. ಹೀಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ನಿಯಮ 69ರಡಿಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರ ನೀಡಿದ ಅವರು, ಬಿಜೆಪಿ ಅವಧಿಯಲ್ಲಿ ಶಾಸಕರ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆಯಾಗಿತ್ತು. ಆಗ ಯಾರು ರಾಜೀನಾಮೆ ನೀಡಿದರು. ಬಿಜೆಪಿ ಅವಧಿಯಲ್ಲಿ ಹೊರಬಂದ ಹಗರಣ ಬಗ್ಗೆ ನನ್ನ ಬಳಿಯೂ ದಾಖಲೆಗಳಿವೆ ಎಂದು ತಿರುಗೇಟು ನೀಡಿದರು.
ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಅಕ್ರಮ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದ ಆರ್.ಬಿ.ತಿಮ್ಮಾಪುರ, ನನ್ನ ವಿರುದ್ಧ ಲಂಚದ ಆರೋಪ ಮಾಡಿರುವ ಆಡಿಯೋ ಮಾಡಿದ ವ್ಯಕ್ತಿ ಸಿಎಲ್-7 ಪರವಾನಗೆಗೆ ಅರ್ಜಿ ಸಲ್ಲಿಸಿದ್ದು, ಆತ ಸಲ್ಲಿಸಿರುವ ದಾಖಲೆಗಳೇ ಸಮರ್ಪಕವಾಗಿಲ್ಲ. ಹೀಗಾಗಿ ಬ್ಲಾಕ್ಮೇಲ್ ಪ್ರಯತ್ನ ಮಾಡಿದ್ದಾರೆ ಎಂದು ವಿವರಣೆ ನೀಡಿದರು.
ನಾನು ದಲಿತ ಸಮುದಾಯಕ್ಕೆ ಸೇರಿದ್ದೇನೆಂದು ನನ್ನ ಸ್ಥಾನ ಉಳಿಸಿಕೊಳ್ಳಲು ಬಳಸಿಕೊಳ್ಳಲು ಹೋಗುವುದಿಲ್ಲ. ಆದರೆ, ನಾನು ಯಾವುದೇ ರೀತಿಯಲ್ಲಿಯೂ ತಪ್ಪು ಮಾಡಿಲ್ಲ. ಬಿಜೆಪಿ ಅವಧಿಯಲ್ಲಿ 1314 ಪರವಾನಗೆ ನೀಡಿದ್ದಾರೆ. ಆದರೆ, ನನ್ನ ಅವಧಿಯಲ್ಲಿ 1,195 ಮದ್ಯದಂಗಡಿಗಳ ಪರವಾನಗೆ ನೀಡಲಾಗಿದೆ ಎಂದು ಅವರು ವಿವರ ನೀಡಿದರು.







