ಸುಲಿಗೆಕೋರರ ಹಾವಳಿ | ಹೆದ್ದಾರಿಗಳಲ್ಲಿ ಸಂಚರಿಸುವ ವೇಳೆ ಎಚ್ಚರ ವಹಿಸಿ ಎಂದ ಗೃಹ ಇಲಾಖೆ

ಸಾಂದರ್ಭಿಕ ಚಿತ್ರ (AI)
ಬೆಳಗಾವಿ(ಸುವರ್ಣವಿಧಾನಸೌಧ): ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸ್ವಂತ ವಾಹನಗಳಲ್ಲಿ ಪ್ರಯಾಣ ಮಾಡುವ ವೇಳೆ ಎಚ್ಚರಿಕೆಯಿಂದ ಇರಬೇಕು. ನಿರ್ಜನ ಪ್ರದೇಶಗಳಲ್ಲಿ ಯಾರಾದರೂ ಕಾರು ನಿಲ್ಲಿಸಲು ಕೋರಿದರೆ ಎಚ್ಚರ ವಹಿಸಬೇಕು. ಹೆದ್ದಾರಿಗಳಲ್ಲಿ ದರೋಡೆ ಮತ್ತು ಸುಲಿಗೆಕೋರರ ಹಾವಳಿ ಇದ್ದು, ಕಳೆದ ಮೂರು ವರ್ಷಗಳಲ್ಲಿ 403 ಹೆದ್ದಾರಿ ದರೋಡೆ ಪ್ರಕರಣಗಳು ವರದಿಯಾಗಿವೆ ಎಂದು ಗೃಹ ಇಲಾಖೆ ತಿಳಿಸಿದೆ.
ಗುರುವಾರ ಸದಸ್ಯರೊಬ್ಬರು ಕೇಳಿದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಇಲಾಖೆ, ‘2023ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 81 ಸುಲಿಗೆ ಹಾಗೂ 23 ದರೋಡೆ ಪ್ರಕರಣ ವರದಿಯಾಗಿದೆ. 2024ರಲ್ಲಿ 66 ಸುಲಿಗೆ ಹಾಗೂ 16 ದರೋಡೆ ಪ್ರಕರಣ ನಡೆದಿದೆ. 2025ರ ನವೆಂಬರ್ 15ರ ವರೆಗಿನ ಮಾಹಿತಿಯ ಪ್ರಕಾರ 51 ಸುಲಿಗೆ ಮತ್ತು 14 ದರೋಡೆ ಪ್ರಕರಣಗಳು ವರದಿಯಾಗಿವೆ ಎಂದು ಉಲ್ಲೇಖಿಸಲಾಗಿದೆ.
ರಾಜ್ಯ ಹೆದ್ದಾರಿಯಲ್ಲಿ 2023ರಲ್ಲಿ 39 ಸುಲಿಗೆ, 17 ದರೋಡೆ ನಡೆದರೆ, 2024ರಲ್ಲಿ 35 ಸುಲಿಗೆ, 22 ದರೋಡೆಗಳು ನಡೆದಿವೆ. 2025ರಲ್ಲಿ 20 ಸುಲಿಗೆ ಪ್ರಕರಣ ಮತ್ತು 19 ದರೋಡೆ ಪ್ರಕರಣ ನಡೆದಿವೆ. ದರೋಡೆ ಪ್ರಕರಣಗಳನ್ನು ನಿಯಂತ್ರಣ ಮಾಡುವುದು ಪೊಲೀಸರಿಗೆ ಸವಾಲಿನ ಸಂಗತಿಯಾಗಿದೆ ಎಂದು ತಿಳಿಸಲಾಗಿದೆ.
ನಿಯಮಿತ ತಪಾಸಣೆ:
ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ, ಸಂಶಯಾಸ್ಪದ ವ್ಯಕ್ತಿಗಳನ್ನು ಹಾಗೂ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೆ, ರಾತ್ರಿ ಗಸ್ತು ಕರ್ತವ್ಯಕ್ಕೆ ಪ್ರತಿ ಠಾಣೆಗಳಿಗೆ ದ್ವಿಚಕ್ರ ವಾಹನಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ವಾಹನಗಳಿಗೆ ಅಳವಡಿಸಲಾದ ಸೈರನ್ ಹಾಗೂ ರೆಡ್ಲೈಟ್ಗಳನ್ನು ಹಾಕಿಕೊಂಡು ರಾತ್ರಿ ಗಸ್ತನ್ನು ಮಾಡಲು ಸೂಚಿಸಲಾಗಿದೆ.







