ಸ್ಟಾರ್ಟ್‍ಅಪ್‍ಗಳಿಗೆ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಜ.1ರವರೆಗೆ ಅವಧಿ ವಿಸ್ತರಣೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಟಾರ್ಟ್ ಅಪ್‍ಗಳಿಗೆ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನವನ್ನು 2024ರ ಜನವರಿ 1ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಡಿ.23ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ್ದರಿಂದ ಸ್ಟಾರ್ಟ್‍ಅಪ್‍ಗಳು ತಮ್ಮ ಅರ್ಜಿ ಸಲ್ಲಿಸಲು ಇನ್ನಷ್ಟು ದಿನಗಳ ಕಾಲಾವಕಾಶ ಬೇಕೆಂಬುದನ್ನು ಮನಗಂಡು ಅರ್ಜಿ ಸಲ್ಲಿಕೆಯ ದಿನವನ್ನು ಮುಂದಿನ ಸಾಲಿನ ಜ.1ರ ಸಂಜೆ 5 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದರು.
ಹೊಸ ಹೊಸ ಸ್ಟಾರ್ಟ್‍ಅಪ್‍ಗಳಿಂದ ವಿನೂತನ ಚಿಂತನೆಯನ್ನು ಹೊರತಂದು ಅದನ್ನು ಪೋಷಿಸುವ ಜೊತೆಗೆ ವಿವಿಧ ಹಂತಗಳಲ್ಲಿ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಗ್ರಾಂಟ್-ಇನ್-ಏಡ್ ಯೋಜನೆಯನ್ನು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಜಾರಿಗೆ ತಂದಿತ್ತು ಎಂದು ಅವರು ಹೇಳಿದರು.
ಮಾರುಕಟ್ಟೆ ಅಭಿವೃದ್ಧಿ ಮತ್ತು ಸ್ಕೇಲ್-ಅಪ್ ಅಭಿವೃದ್ಧಿಪಡಿಸಲು ಆರಂಭಿಕ ಹಂತದ ಹಣಕಾಸಿನ ಅವಶ್ಯಕತೆ ಸ್ಟಾರ್ಟ್‍ಅಪ್‍ಗೆ ಬೇಕಾಗಲಿದ್ದು, ಇದಕ್ಕಾಗಿ 50 ಲಕ್ಷ ರೂ.ಗಳವರೆಗೆ ಅನುದಾನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖವಾಗಿ ಮಾರ್ಗದರ್ಶಕರು, ನೆಟ್ವರ್ಕಿಂಗ್ ಅವಕಾಶಗಳು, ಇನ್ಕ್ಯುಬೇಶನ್ ಸೌಲಭ್ಯಗಳು ಇತ್ಯಾದಿ ಸೇರಿದಂತೆ ಹಲವು ಕ್ಷೇತ್ರಗಳ ಸ್ಟಾರ್ಟ್‍ಅಪ್‍ಗೆ ಸಮಗ್ರ ಉದ್ಯಮಶೀಲತಾ ವೇದಿಕೆಯನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
‘ಐಡಿಯಾ2ಪಿಒಸಿ-ಎಲಿವೇಟೆಡ್’ ಯೋಜನೆಯು ವಿಭಿನ್ನ ಅನ್ವೇಷಣೆಗಳೊಂದಿಗೆ ಮುಂದೆ ಬರುವ ಉದಯೋನ್ಮುಖ ಸ್ಟಾರ್ಟ್‍ಅಪ್‍ಗೆ ಹಣಕಾಸಿನ ನೆರವು ನೀಡುವುದಾಗಿದೆ. ಈ ಯೋಜನೆಗೆ ಸ್ಟಾರ್ಟ್‍ಅಪ್‍ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಟಾರ್ಟ್‍ಅಪ್‍ಗಳು ತಮ್ಮ ವಿಶಿಷ್ಟ ಹಾಗ ವಿನೂತನ ಚಿಂತನೆಗಳಿಗೆ ಹಣಕಾಸು ಹೊಂದಿಸಿಕೊಳ್ಳಲು ಸರಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ, ಕಾಲಾವಕಾಶ ಹೆಚ್ಚಿಸಿರುವುದರಿಂದ ಮತ್ತಷ್ಟು ಅನುಕೂಲವಾಗಲಿದೆ ಎಂದು ಸಚಿವ ಖರ್ಗೆ ತಿಳಿಸಿದ್ದು ಈ ವಿಸ್ತರಣೆಯು ಹೆಚ್ಚಿನ ಸ್ಟಾರ್ಟ್‍ಅಪ್‍ಗಳಿಗೆ ಭಾಗವಹಿಸಲು ಅವಕಾಶ ನೀಡುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.







