Fact Check | ಅಜ್ಮಲ್ ಕಸಬ್ ಗೆ ಕ್ಷಮಾದಾನ ಕೋರಿ ಕಾಂಗ್ರೆಸ್ ಅರ್ಜಿ ಸಲ್ಲಿಸಿತ್ತು ಎಂಬ BJP ಕರ್ನಾಟಕದ ಆರೋಪ ಸುಳ್ಳು!
2009ರ ವಿಕಿಲೀಕ್ಸ್ ಸಂದೇಶದಲ್ಲಿ ಅಮೆರಿಕ ರಾಯಭಾರಿ ಬರೆದಿದ್ದೇನು?

ಬೆಂಗಳೂರು: 2008ರ ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿ ಅಜ್ಮಲ್ ಕಸಬ್ ಗೆ ಕ್ಷಮಾದಾನ ನೀಡುವಂತೆ ಕಾಂಗ್ರೆಸ್ ನಾಯಕರು ಮನವಿ ಸಲ್ಲಿಸಿದ್ದರು ಎಂದು ಬಿಜೆಪಿ ಕರ್ನಾಟಕ ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ಆರೋಪಿಸಿದೆ. ಆರು ಸ್ಲೈಡ್ ಗಳ ಈ ಪೋಸ್ಟ್ ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ತೀಸ್ತಾ ಸೆಟಲ್ವಾಡ್, ಅರುಣಾ ರಾಯ್ ಮತ್ತು ಹರ್ಷ್ ಮಂದರ್ ಅವರ ಹೆಸರುಗಳನ್ನು ಎಳೆದು ತರಲಾಗಿದೆ.
ಆದರೆ, ಈ ಪೋಸ್ಟ್ ನ ಮುಖ್ಯ ತಿರುಳೇ ತಪ್ಪಾಗಿದೆ. ಅಸಲಿಗೆ ಅಲ್ಲಿ ನಡೆದಿದ್ದೇನು? ಕಸಬ್ ಪರವಾಗಿ ಯಾರಾದರೂ ಕ್ಷಮಾದಾನ ಕೇಳಿದ್ದರೇ ಅಥವಾ ಅದು ಮರಣದಂಡನೆ ವಿರುದ್ಧದ ತಾತ್ವಿಕ ನಿಲುವಾಗಿತ್ತೇ ಎಂಬುದನ್ನು ದಾಖಲೆಗಳ ಮೂಲಕ ಪರಿಶೀಲಿಸೋಣ.
ಕಸಬ್ ಸ್ವತಃ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗಿಂತ ಭಿನ್ನವಾಗಿ, 2012ರ ಅ. 28ರಂದು ಮುಂಬೈ ವಕೀಲ ಯುಗ್ ಮೋಹಿತ್ ಚೌಧರಿ ಅವರು ಇನ್ನೂರಕ್ಕೂ ಹೆಚ್ಚು ನಾಗರಿಕರ ಪರವಾಗಿ ರಾಷ್ಟ್ರಪತಿಗಳಿಗೆ ಮನವಿಯೊಂದನ್ನು ಸಲ್ಲಿಸಿದ್ದರು. ನವೆಂಬರ್ 2012ರ oneindia ವರದಿಯ ಪ್ರಕಾರ, ಆ ಮನವಿಯ ಉದ್ದೇಶ ಕಸಬ್ ನ ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸುವುದಾಗಿರಲಿಲ್ಲ. ಬದಲಾಗಿ, ಮರಣದಂಡನೆಗೆ ತಾತ್ವಿಕ ವಿರೋಧ ವ್ಯಕ್ತಪಡಿಸಿ, ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂಬುದು ಆ ನಾಗರಿಕರ ಕೋರಿಕೆಯಾಗಿತ್ತು. ಅಂದರೆ, ಗಲ್ಲುಶಿಕ್ಷೆಯ ಬದಲು ಕಸಬ್ ಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂಬುದು ಆ ಮನವಿಯ ಸಾರಾಂಶವಾಗಿತ್ತು.
ಈ ಮನವಿಯನ್ನು ಕಾಂಗ್ರೆಸ್ ಪಕ್ಷ ಸಲ್ಲಿಸಿತ್ತೇ ಎಂದರೆ, ಖಂಡಿತ ಇಲ್ಲ. ಇದನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಗಳು ಸಲ್ಲಿಸಿರುವುದಕ್ಕೆ ಯಾವುದೇ ಪುರಾವೆಯಿಲ್ಲ. ಪ್ರಕಟಿತ ಸಹಿದಾರರ ಪಟ್ಟಿಯಲ್ಲಿ ವಕೀಲರು, ಪತ್ರಕರ್ತರು, ಕಲಾವಿದರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅರುಣಾ ರಾಯ್ ಮತ್ತು ಹರ್ಷ್ ಮಂದರ್ ಅವರ ಹೆಸರುಗಳಿವೆ. ವಿವಿಧ ಕ್ಷೇತ್ರಗಳ ನಾಗರಿಕರು ವೈಯಕ್ತಿಕ ನೆಲೆಯಲ್ಲಿ ಸಹಿ ಹಾಕಿದ್ದ ಈ ಮನವಿಯನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವು ಎಂದು ಬಿಂಬಿಸಲಾಗಿದೆ.
https://www.archivepmo.nic.in/drmanmohansingh/press-details.php?nodeid=1104
ಹಾಗಾದರೆ, ಇವರನ್ನೆಲ್ಲ ಕಾಂಗ್ರೆಸ್ ಜೊತೆ ಹೇಗೆ ಜೋಡಿಸಲಾಗಿದೆ?
ಇಲ್ಲಿ ಬೇರೆ ಬೇರೆ ಕಾಲಘಟ್ಟದ ಸರ್ಕಾರಿ ನೇಮಕಾತಿ ಮತ್ತು ಪ್ರಶಸ್ತಿಗಳನ್ನು ಬಳಸಿಕೊಳ್ಳಲಾಗಿದೆ. 2004ರ ಜೂನ್ ಹಾಗೂ 2010ರ ಜೂನ್ ನ ಪ್ರಧಾನಿ ಕಚೇರಿ ಪ್ರಕಟಣೆಗಳ ಪ್ರಕಾರ, ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಸಲಹಾ ಮಂಡಳಿಯ (NAC) ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಮಾಲೋಚನೆಯೊಂದಿಗೆ ಅರುಣಾ ರಾಯ್ ಮತ್ತು ಹರ್ಷ್ ಮಂದರ್ ಅವರನ್ನು ಮಂಡಳಿಗೆ ನಾಮನಿರ್ದೇಶನ ಮಾಡಿದ್ದರು.
ಅದೇ ರೀತಿ, 2002ರ PTI ವರದಿಯಂತೆ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಎಂ. ಅಹ್ಮದಿ ನೇತೃತ್ವದ ಸಮಿತಿಯು ಮಂದರ್ ಮತ್ತು ಸೆಟಲ್ವಾಡ್ ಅವರಿಗೆ ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿಯನ್ನು ನೀಡಿತ್ತು. ಸೋನಿಯಾ ಗಾಂಧಿ ಆ ಸಮಿತಿಯ ಸದಸ್ಯರಾಗಿದ್ದರಷ್ಟೇ. ಪ್ರಶಸ್ತಿಯನ್ನು ವೈಯಕ್ತಿಕವಾಗಿ ಪ್ರದಾನ ಮಾಡಿದ್ದು ಅವರಲ್ಲ; ಸಮಿತಿಯ ಅಧ್ಯಕ್ಷರಾಗಿದ್ದ ಎ.ಎಂ. ಅಹ್ಮದಿ.
https://www.rediff.com/news/2002/aug/07rajiv.htm
2007ರ ಸರ್ಕಾರಿ ಗೆಝೆಟ್ ಅಧಿಸೂಚನೆಯಂತೆ, UPA ಆಡಳಿತಾವಧಿಯಲ್ಲಿ ಸೆಟಲ್ವಾಡ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ, ಪದ್ಮಶ್ರೀ ಪ್ರಶಸ್ತಿ ಲಭಿಸಿದೆ ಎಂಬ ಕಾರಣಕ್ಕೆ ಸೆಟಲ್ವಾಡ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು ಅಥವಾ ಪಕ್ಷದ ಅಧಿಕೃತ ಪ್ರತಿನಿಧಿಯಾಗಿದ್ದರು ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಪ್ರಶಸ್ತಿ ಪುರಸ್ಕೃತರಾಗಿರುವುದು ಮತ್ತು ರಾಜಕೀಯ ಪಕ್ಷದ ಸದಸ್ಯರಾಗಿರುವುದು ಪ್ರತ್ಯೇಕ ವಿಚಾರಗಳು ಎಂಬುದನ್ನೂ ಗಮನಿಸಬೇಕು.
https://www.padmaawards.gov.in/Document/pdf/notifications/PadmaAwards/2007.pdf
ಹಿಂದಿನ ವರ್ಷಗಳಲ್ಲಿ ಪಡೆದ ಈ ಗೌರವಗಳನ್ನು ಮುಂದಿಟ್ಟುಕೊಂಡು, 2012ರ ನಾಗರಿಕ ಮನವಿಗೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂಬಂತೆ ಚಿತ್ರಿಸಲಾಗಿದೆ.
ಕೊನೆಯ ಸ್ಲೈಡ್ ನಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಲಾಗಿದೆ. ಲಷ್ಕರ್-ಎ-ತೊಯ್ಬಾಗಿಂತ 'ಹಿಂದೂ ಭಯೋತ್ಪಾದನೆ' ದೊಡ್ಡ ಬೆದರಿಕೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದು ಪೋಸ್ಟ್ ಬಿಂಬಿಸುತ್ತದೆ. ವಾಸ್ತವದಲ್ಲಿ, 2009ರ ಜುಲೈನಲ್ಲಿ ಅಂದಿನ ಅಮೆರಿಕದ ರಾಯಭಾರಿ ತಿಮೋತಿ ರೋಮರ್ ಅವರೊಂದಿಗೆ ನಡೆದ ಖಾಸಗಿ ಮಾತುಕತೆಯನ್ನು ವಿಕಿಲೀಕ್ಸ್ (09NEWDELHI1624) ಬಹಿರಂಗಪಡಿಸಿತ್ತು. ಆ ರಾಜತಾಂತ್ರಿಕ ಸಂದೇಶದ ಪ್ರಕಾರ, ಲಷ್ಕರ್-ಎ-ತೊಯ್ಬಾಗೆ ಭಾರತದ ಕೆಲವು ಮುಸ್ಲಿಂ ವರ್ಗಗಳಲ್ಲಿ ಬೆಂಬಲವಿರುವುದನ್ನು ಉಲ್ಲೇಖಿಸಿದ್ದ ರಾಹುಲ್, ಮೂಲಭೂತವಾದಿ ಹಿಂದೂ ಗುಂಪುಗಳ ('radicalized Hindu groups') ಬೆಳವಣಿಗೆಯೂ ದೇಶಕ್ಕೆ ದೊಡ್ಡ ಅಪಾಯವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.
ಭಾರತಕ್ಕೆ ಲಷ್ಕರ್-ಎ-ತೊಯ್ಬಾದಿಂದ ಎದುರಾಗಿರುವ ತಕ್ಷಣದ ಅಪಾಯದ ಕುರಿತು ರಾಹುಲ್ ಗಾಂಧಿ ಅವರ ಅಭಿಪ್ರಾಯವನ್ನು ಅಮೆರಿಕದ ರಾಯಭಾರಿ ಕೇಳಿದ್ದರು. ಆಗ ರಾಹುಲ್ ಗಾಂಧಿ ಅವರು ಭಾರತದ ಮುಸ್ಲಿಂ ಸಮುದಾಯದ ಕೆಲವು ವರ್ಗಗಳಲ್ಲಿ ಲಷ್ಕರ್-ಎ-ತೊಯ್ಬಾಗೆ ಬೆಂಬಲವಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ಹೇಳಿದ್ದರು.
ಆದರೆ, ಮೂಲಭೂತವಾದಿ ಹಿಂದೂ ಗುಂಪುಗಳ ಬೆಳವಣಿಗೆಯೂ ಭಾರತಕ್ಕೆ ದೊಡ್ಡ ಅಪಾಯವಾಗಬಹುದು ಎಂದು ಎಚ್ಚರಿಸಿದ್ದರು. ಈ ಗುಂಪುಗಳು ಮುಸ್ಲಿಂ ಸಮುದಾಯದೊಂದಿಗೆ ಧಾರ್ಮಿಕ ಉದ್ವಿಗ್ನತೆ ಮತ್ತು ರಾಜಕೀಯ ಸಂಘರ್ಷಗಳನ್ನು ಸೃಷ್ಟಿಸಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಂತಹ ಬಿಜೆಪಿಯ ಕೆಲವು ವಿಭಜನಕಾರಿ ನಾಯಕರು ಸೃಷ್ಟಿಸುತ್ತಿದ್ದ ಉದ್ವಿಗ್ನತೆಯನ್ನು ಉದ್ದೇಶಿಸಿ ರಾಹುಲ್ ಈ ಮಾತು ಹೇಳಿದ್ದರು ಎಂದು ಸ್ವತಃ ಅಮೆರಿಕದ ರಾಯಭಾರಿ ಸಂದೇಶದಲ್ಲಿ ಟಿಪ್ಪಣಿ ಬರೆದಿದ್ದರು. ಈ ವಿಷಯವನ್ನು ವಿಕಿಲೀಕ್ಸ್ ಪ್ರಕಟಿಸಿದ ಮೂಲ ರಾಜತಾಂತ್ರಿಕ ಸಂದೇಶದ ಐದನೇ ಪ್ಯಾರಾಗ್ರಾಫ್ನಲ್ಲಿ ದಾಖಲಿಸಲಾಗಿದೆ. ಎಲ್ಲಿಯೂ ರಾಹುಲ್ ಗಾಂಧಿ ಅವರು 'ಹಿಂದೂ ಭಯೋತ್ಪಾದನೆ' ಎಂಬ ಪದವನ್ನು ಬಳಸಿರಲಿಲ್ಲ.
https://wikileaks.jcvignoli.com/cable_09NEWDELHI1624
ಇದಲ್ಲದೆ, ಇದು ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ನೀಡಿದ ಹೇಳಿಕೆಯಲ್ಲ. ಅಮೆರಿಕದ ರಾಯಭಾರಿಯೊಂದಿಗೆ ನಡೆದ ಖಾಸಗಿ ಮಾತುಕತೆಯ ವಿವರಗಳನ್ನು ರಾಯಭಾರಿ ದಾಖಲಿಸಿರುವ ರಾಜತಾಂತ್ರಿಕ ಸಂದೇಶವಾಗಿದೆ. ಈ ವಿಕಿಲೀಕ್ಸ್ ಸಂದೇಶದ ಬಿಡುಗಡೆಯ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದ್ದನ್ನು ಹಿಂದೂಸ್ತಾನ್ ಟೈಮ್ಸ್ ವರದಿ ದಾಖಲಿಸಿದೆ. ಈ ಸಂದೇಶದ ಪ್ರಕಟಣೆಯ ನಂತರ, 2010ರ ಡಿ. 17ರಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಪ್ರತಿಕ್ರಿಯಿಸಿದ್ದರು. ಈ ಸಂದೇಶದ ಬಿಡುಗಡೆ ಹಿಂದೆ ಪಿತೂರಿ ಇರಬಹುದೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅವರು ಹೇಳಿದ್ದರು.
ಇಡೀ ಪೋಸ್ಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರತ್ಯೇಕ ಸಂಗತಿಗಳನ್ನು ಒಂದೇ ಸರಪಳಿಯಲ್ಲಿ ಪೋಣಿಸಿ ತಪ್ಪು ಕಲ್ಪನೆ ಮೂಡಿಸಿರುವುದು ಸ್ಪಷ್ಟವಾಗುತ್ತದೆ. ನಾಗರಿಕರ ಗುಂಪು ಸಲ್ಲಿಸಿದ್ದ ಮನವಿ ಮರಣದಂಡನೆ ರದ್ದತಿಗೆ ಸೀಮಿತವಾಗಿತ್ತೇ ಹೊರತು ಕಸಬ್ ಪರವಾಗಿರಲಿಲ್ಲ. 2009ರ ರಾಹುಲ್ ಗಾಂಧಿ ಅವರ ಮಾತುಕತೆಯಲ್ಲಿ 'ಹಿಂದೂ ಭಯೋತ್ಪಾದನೆ' ಎಂಬ ಪದಬಳಕೆಯೇ ಇಲ್ಲ. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಂತಹ ಬಿಜೆಪಿಯ ಕೆಲವು ವಿಭಜನಕಾರಿ ನಾಯಕರು ಸೃಷ್ಟಿಸುತ್ತಿದ್ದ ಉದ್ವಿಗ್ನತೆಯನ್ನು ಉದ್ದೇಶಿಸಿ ರಾಹುಲ್ ಈ ಮಾತು ಹೇಳಿದ್ದರು ಎಂದು ಸ್ವತಃ ಅಮೆರಿಕದ ರಾಯಭಾರಿ ಸಂದೇಶದಲ್ಲಿ ಟಿಪ್ಪಣಿ ಬರೆದಿದ್ದರು. ಕಾಂಗ್ರೆಸ್ ಪಕ್ಷ ಕಸಬ್ ಗೆ ಕ್ಷಮಾದಾನ ಕೋರಿದೆ ಎಂಬ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ. ಈ ಆರೋಪ ಸತ್ಯಕ್ಕೆ ದೂರವಾಗಿದೆ.






