FACT CHECK | ಕಾಕ್ರೋಚ್ ಪಾರ್ಟಿಯ ಅರ್ಧದಷ್ಟು ಬೆಂಬಲಿಗರು ಪಾಕಿಸ್ತಾನದವರು ಎಂದು ಫೇಕ್ ಸುದ್ದಿ ಹರಡಿದ ಮಾಜಿ ಸಚಿವ ಸುರೇಶ್ ಕುಮಾರ್ !

ಬೆಂಗಳೂರು: ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ಆನ್‌ಲೈನ್ ಆಂದೋಲನ 'ಕಾಕ್ರೋಚ್ ಜನತಾ ಪಾರ್ಟಿ' (CJP) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ‘ಕಾಕ್ರೋಚ್ ಜನತಾ ಪಕ್ಷ’ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ನಲ್ಲಿ ಬಿಜೆಪಿ, ಕಾಂಗ್ರೆಸ್ ನ ಅಧಿಕೃತ ಖಾತೆಯನ್ನು ಹಿಂದಿಕ್ಕಿದೆ.
CJP ಖಾತೆ ಕೇವಲ ಐದು ದಿನಗಳಲ್ಲಿ 1.5 ಕೋಟಿಗೂ ಹೆಚ್ಚು ಫಾಲೋವರ್ಸ್ ಗಳನ್ನು ಪಡೆದಿದೆ.
ಈ ನಡುವೆ ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್ ಅವರು CJP ಇನ್‌ಸ್ಟಾಗ್ರಾಮ್ ಖಾತೆ ಕುರಿತ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸಿಜೆಪಿ ಇನ್‌ಸ್ಟಾಗ್ರಾಮ್ ಖಾತೆಯ ಶೇ. 49 ರಷ್ಟು ಫಾಲೋವರ್ಸ್‌ಗಳು ಪಾಕಿಸ್ತಾನದವರು ಎಂದು ಬಿಂಬಿಸಲಾಗಿದೆ.
ಸತ್ಯಾಸತ್ಯತೆ ಏನು?
ಸುರೇಶ್ ಕುಮಾರ್ ಅವರ ಈ ಪೋಸ್ಟ್ ನ ಸತ್ಯಾಸತ್ಯತೆ ಪರಿಶೀಲಿಸಿದಾಗ ಈ ಪೋಸ್ಟ್ ಗೆ ಅಧಿಕೃತ ಸಾಕ್ಷ್ಯ ಲಭ್ಯವಾಗಿಲ್ಲ.
ಇನ್‌ಸ್ಟಾಗ್ರಾಮ್ ಯಾವುದೇ ಸಾರ್ವಜನಿಕ ಪ್ರೊಫೈಲ್‌ನ ಫಾಲೋವರ್ಸ್‌ಗಳು ಯಾವ ದೇಶದವರು ಎಂಬ ನಿಖರವಾದ ಭೌಗೋಳಿಕ ಅಂಕಿ-ಅಂಶಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದಿಲ್ಲ. ಈ ಮಾಹಿತಿಯು ಕೇವಲ ಆ ಖಾತೆಯ ಮಾಲಕರಿಗೆ ಮಾತ್ರ ಕಾಣಿಸುತ್ತದೆ. ಸುರೇಶ್ ಕುಮಾರ್ ಅವರು ಹಂಚಿಕೊಂಡಿರುವ ಚಾರ್ಟ್ ನಕಲಿ ಎಂದು ಆಲ್ಟ್ ನ್ಯೂಸ್ ಸಹ ಸ್ಥಾಪಕ ಮೊಹಮ್ಮದ್ ಝುಬೇರ್ ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದೇನು?
ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಇಂದು ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ CJPಯ ಶೇ.94ರಷ್ಟು ಫಾಲೋವರ್ಸ್ ಭಾರತೀಯರು ಎಂದು ಹೇಳಿದ್ದಾರೆ.
"ಬಿಜೆಪಿ ಮೂರ್ಖರು ನಿಮ್ಮನ್ನು ದಿಕ್ಕು ತಪ್ಪಿಸುವ ಮುನ್ನ CJPಯ ಫಾಲೋವರ್ಸ್ ಕೆಲವು ಅಂಕಿಅಂಶಗಳು ಇಲ್ಲಿವೆ. 94% ರಷ್ಟು ಫಾಲೋವರ್ಸ್ ಭಾರತದವರಾಗಿದ್ದಾರೆ." ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಸುರೇಶ್ ಕುಮಾರ್ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಿದ್ದು ಮೊದಲಲ್ಲ:
ಬಿಜೆಪಿಯ ಹಿರಿಯ ನಾಯಕರಾದ ಸುರೇಶ್ ಕುಮಾರ್ ಅವರು ಇಂತಹ ಸುಳ್ಳು ಸುದ್ದಿಗಳನ್ನು ಈ ಹಿಂದೆಯೂ ಹಲವು ಬಾರಿ ಪೋಸ್ಟ್ ಮಾಡಿದ್ದು, ಬಳಿಕ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾದ ಬಳಿಕ ಅದನ್ನು ಡಿಲೀಟ್ ಮಾಡಿದ್ದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಅವರೇ ಅನಾವರಣ ಮಾಡಿದ್ದಾರೆ ಎಂದು ಸುರೇಶ್ ಕುಮಾರ್ ಅವರು AI ಯಿಂದ ರಚಿತ ಚಿತ್ರವನ್ನು ಹಂಚಿಕೊಂಡಿದ್ದರು. ತೀವ್ರ ಟೀಕೆಯ ಬಳಿಕ ಬಳಿಕ ಅವರು ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.
ದೇಶದ ಜನರಿಗೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಚಿನ್ನ ಖರೀದಿಸಬೇಡಿ ಎಂದು ಕರೆ ನೀಡಿದ್ದರು ಎಂಬ ʼದಿ ಹಿಂದೂʼ ಪತ್ರಿಕೆಯದ್ದು ಎಂದು ಹೇಳಲಾದ ನಕಲಿ ಕ್ಲಿಪಿಂಗ್ ಒಂದನ್ನು ಹಂಚಿಕೊಂಡಿದ್ದರು. ವೈರಲ್ ಕ್ಲಿಪ್ಪಿಂಗ್ AI-ರಚಿತವಾಗಿದ್ದು, ಅದು ನಿಜವಾದದ್ದಲ್ಲ ಎಂದು ತಿಳಿದ ಮೇಲೆ ಅವರು ಅದನ್ನೂ ಡಿಲೀಟ್ ಮಾಡಿದ್ದರು.






