ಬಿಸಿಯೂಟ ಯೋಜನೆಯ ವೈಫಲ್ಯ; ಮುಖ್ಯ ಶಿಕ್ಷಕರ ಹೊಣೆ ಮಾಡುವ ಸುತ್ತೋಲೆ ಹಿಂದಕ್ಕೆ ಪಡೆಯಲು ಸಿಎಂಗೆ ರಮೇಶ್‍ಬಾಬು ಮನವಿ

ಬೆಂಗಳೂರು, ಡಿ.5: ಕಲಬುರಗಿ ಜಿಲ್ಲೆಯ ಒಂದು ಪ್ರಕರಣವನ್ನು ಬಳಸಿಕೊಂಡು ಶಿಕ್ಷಣ ಇಲಾಖೆಯು ಬಿಸಿಯೂಟ ಯೋಜನೆಯ ವೈಫಲ್ಯಗಳಿಗೆ ಶಾಲೆಯ ಮುಖ್ಯ ಶಿಕ್ಷಕರನ್ನು ಹೊಣೆ ಮಾಡುವ ಸುತ್ತೋಲೆಯನ್ನು ಹೊರಡಿಸುವುದರ ಮೂಲಕ ಅನೇಕ ಗೊಂದಲಗಳಿಗೆ ಅವಕಾಶ ನೀಡಿರುತ್ತದೆ. ಹೀಗಾಗಿ, ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲು ಆದೇಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಅವರು ಮನವಿ ಮಾಡಿದ್ದಾರೆ.
ಶಿಕ್ಷಣ ಇಲಾಖೆಯು ಪದೇ ಪದೇ ಇಂತಹ ಸುತ್ತೋಲೆಗಳ ಮೂಲಕ ಶಾಲಾ ಶಿಕ್ಷಕರಲ್ಲಿ ಗೊಂದಲವನ್ನು ಉಂಟುಮಾಡುತ್ತಿದೆ. ಶಾಲಾ ಶಿಕ್ಷಕರನ್ನು ಭೋದನಾ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಅವಕಾಶ ನೀಡಿದರೆ ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ ಎಂದು ರಮೇಶ್ ಬಾಬು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರನ್ನು ಭೋದಕೇತರ ಕಾರ್ಯದಲ್ಲಿ ಹೊಣೆಗಾರರನ್ನಾಗಿ ಮಾಡುವುದು ಸಮಂಜಸವಾಗಿರುವುದಿಲ್ಲ. ಆದುದರಿಂದ ತಾವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಲು ಆದೇಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಮುಖಂಡ ರಮೇಶ್ ಬಾಬು ಅವರು ಮನವಿ ಮಾಡಿದ್ದಾರೆ.
ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಡಿಯಲ್ಲಿ ಶಾಲಾ ಹಂತದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ (ಬಿಸಿಯೂಟ ಯೋಜನೆ) ಜಾರಿಯಲ್ಲಿದ್ದು, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ರಾಜ್ಯದ ಶಾಲೆಗಳಲ್ಲಿ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದು ಮನವಿಯಲ್ಲಿ ರಮೇಶ್ ಬಾಬು ಅವರು ತಿಳಿಸಿದ್ದಾರೆ.







