ದ.ಕ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಹಳದಿ ರೋಗದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ : ಅಶೋಕ್ ರೈ

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಹಳದಿ ರೋಗ ಬಂದಿದೆ. ಸುಳ್ಯ ತಾಲೂಕಿನ 10 ಗ್ರಾಮಗಳಲ್ಲಿ ಹಳದಿ ರೋಗ ಕಂಡು ಬಂದಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಬರಗಾಲದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಳ್ಯ ತಾಲೂಕಿನ 10 ಗ್ರಾಮಗಳಲ್ಲಿ 37,317 ಹೆಕ್ಟೇರ್ ಭೂ ಪ್ರದೇಶವಿದೆ. ಇದರಲ್ಲಿ 11,449 ಹೆಕ್ಟೇರ್ ಕೃಷಿ ಭೂಮಿ. ಈ ಪೈಕಿ 5111 ಹೆಕ್ಟೇರ್ ಪ್ರದೇಶದಲ್ಲಿ 5558 ರೈತರು ಅಡಿಕೆ ಬೆಳೆ ಬೆಳೆದು, ಹಳದಿ ರೋಗದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಅಡಿಕೆ ಬೆಳೆಗೆ ಹಳದಿ ರೋಗ ಬಂದಿದ್ದರೂ ಈವರೆಗೆ ರೈತರಿಗೆ ಪರಿಹಾರ ಘೋಷಣೆ ಮಾಡಿಲ್ಲ. ರೈತರು ಸಾಲದ ಶೂಲಕ್ಕೆ ಸಿಲುಕಿದ್ದಾರೆ. 480-500 ರೂ.ಗಳಿದ್ದ ಪ್ರತಿ ಕ್ವಿಂಟಾಲ್ ಅಡಿಕೆ ಬೆಲೆಯು ಈಗ 410 ರೂ.ಗಳಿಗೆ ಇಳಿದಿದೆ. ಕೃಷಿ ಕಾರ್ಮಿಕರಿಗೆ ಒಂದು ದಿನಕ್ಕೆ 700 ರೂ.ಕೂಲಿ ನೀಡಬೇಕು. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವು 12 ಸಾವಿರ ಟನ್ ಅಡಿಕೆ ಆಮದಿಗೆ ಅನುಮತಿ ನೀಡಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ರಾಜ್ಯ ಕೃಷಿ ಸಚಿವರು ಈ ಸಂಬಂಧ ಕೇಂದ್ರ ಸರಕಾರದ ಸಚಿವರೊಂದಿಗೆ ಮಾತನಾಡಿ, ಅಡಿಕೆ ಆಮದು ಮಾಡಿಕೊಳ್ಳಲು ಮುಂದಾಗಿರುವ ಕೇಂದ್ರಕ್ಕೆ ರಾಜ್ಯದ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಬೇಕು. ಸುಳ್ಯದಿಂದ ಪುತ್ತೂರಿಗೆ ಈ ರೋಗ ಹರಡಿದರೆ ಇನ್ನೂ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರವು ಅಡಿಕೆಯಲ್ಲಿ ನಿಕೋಟಿನ್ ಅಂಶ ಇದೆ ಎಂದು ಸುಪ್ರೀಂಕೋರ್ಟ್‍ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ. ರಾಜ್ಯ ಸರಕಾರವು ಈ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡಿ ಅಡಿಕೆಯಲ್ಲಿ ನಿಕೋಟಿನ್ ಅಂಶ ಇಲ್ಲದಿರುವುದನ್ನು ಖಚಿತಪಡಿಸಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.







