ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ಪಿ ಹಣ ಬಳಕೆ ವಿರುದ್ಧ ರಾಜ್ಯಾದ್ಯಂತ ಹೋರಾಟ: ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು, ಆ.4: ರಾಜ್ಯ ಸರಕಾರ ಎಸ್ಸಿಪಿ ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿರುವುದನ್ಮು ವಾಪಸ್ ಪಡೆಯದಿದ್ದರೆ, ಎಸ್ಸಿ-ಎಸ್ಟಿ ಸಮುದಾಯದ ಪರವಾಗಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಸರಕಾರ ಎಸ್ಸಿಪಿ ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇವತ್ತು ನಮಗೆ ನಿರಾಸೆಯ, ಆಕ್ರೋಶದ ದಿನ. ಪ್ರಜಾಪ್ರಭುತ್ವದಲ್ಲಿ ಜನರಿಗೆ ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈಗ ದಲಿತರ ಜೀವನದ ಜೊತೆ ಆಟ ಆಡುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರೂ ದಲಿತರ ಕೇರಿಗಳಿಗೆ ಹೋಗಿ ಗ್ಯಾರಂಟಿ ಕಾರ್ಡ್ ನೀಡಿ ಬಂದಿರಿ, ಆಗ ದಲಿತರಿಗೆ ನಿಮ್ಮ ಎಸ್ಸಿಪಿ ಟಿಎಸ್ಪಿ ಹಣ ಬಳಕೆ ಮಾಡುತ್ತೇವೆ ಅಂತ ಹೇಳಬೇಕಿತ್ತು ಎಂದು ಅವರು ತಿಳಿಸಿದರು.
ಆದರೆ, ಆಗ ಹೇಳದೇ ಈಗ ಹಣ ಹೊಂದಿಸಲು ದಲಿತರ ಹಣ ಬಳಕೆ ಮಾಡುತ್ತಿದ್ದೀರಿ ಇದು ದಲಿತರಿಗೆ ಮಾಡುವ ದ್ರೋಹವಾಗಿದೆ. ಗ್ಯಾರಂಟಿಗಳ ಹೆಸರಲ್ಲಿ ರಾಜ್ಯವನ್ನು ದಿವಾಳಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ನಾನು ಬಜೆಟ್ ಸಂದರ್ಭದಲ್ಲಿಯೆ ಹೇಳಿದ್ದೆ, ನೀವು 34 ಸಾವಿರ ಕೊಟಿ ಕೊಡುವುದಾಗಿ ಹೇಳಿದ್ದೀರಿ, ಆದರೆ ಸುಮಾರು 23 ಸಾವಿರ ಕೋಟಿ ಮಾತ್ರ ಎಸ್ಸಿಪಿ ಟಿಎಸ್ಪಿಗೆ ನೀಡುತ್ತಿದ್ದೀರಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಎಸ್ಸಿಪಿ ಟಿಎಸ್ಪಿ ಹಣದಲ್ಲಿ ಶಕ್ತಿ ಯೋಜನೆಗೆ 700 ಕೋಟಿ ರೂ., ಗೃಹ ಲಕ್ಷ್ಮಿ ಯೋಜನೆಗೆ 5500 ಕೋಟಿ ರೂ. ಮೀಸಲಿಟ್ಟಿದ್ದರೆ. ಈ ಯೋಜನೆಯಡಿಯಲ್ಲಿ ಎಸ್ಸಿ, ಎಸ್ಟಿಯವರನ್ನು ಹೇಗೆ ಗುರುತಿಸುತ್ತೀರಾ? ಎಸ್ಸಿಪಿ, ಟಿಎಸ್ಪಿಯಿಂದ ವರ್ಗಾವಣೆ ಮಾಡಿರುವ 11 ಸಾವಿರ ಕೋಟಿ ರೂ.ಗಳು ಎಲ್ಲವೂ ಎಸ್ಸಿ, ಎಸ್ಟಿಯವರಿಗೆ ಬಳಕೆಯಾಗುವುದಿಲ್ಲ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಕೆ.ಬೆಳ್ಳುಬ್ಬಿ ಸೇರಿದಂತೆ ಅನೇಕರು ಹಾಜರಿದ್ದರು.







