ಸಿಜೆಐ ಮೇಲೆ ಶೂ ಎಸೆತ ಕೃತ್ಯ ಸಮರ್ಥಿಸುವವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ: ಸರಕಾರಕ್ಕೆ ಮನೋರಾಜ್ ರಾಜೀವ್ ಆಗ್ರಹ

ಬೆಂಗಳೂರು: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಎಂಬಾತ ಶೂ ಎಸೆಯಲು ಯತ್ನಿಸಿದ ಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥಿಸುತ್ತಿರುವವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ವಕೀಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ್ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಾರ್ತಾ ಭಾರತಿ ಜೊತೆ ಮಾತನಾಡಿದ ಮನೋರಾಜ್ ರಾಜೀವ್, ರಾಕೇಶ್ ಕಿಶೋರ್‌ನ ಕೃತ್ಯವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿರುವವರ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅವಕಾಶವಿದೆ. ಇಂತಹ ಕೃತ್ಯಗಳನ್ನು ಸಮರ್ಥಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯ ಎಂದಿದ್ದಾರೆ.
ರಾಕೇಶ್ ಕಿಶೋರ್‌ನ ಕೃತ್ಯವನ್ನು ಸಮರ್ಥಿಸಿ, ಮುಖ್ಯ ನ್ಯಾಯಮೂರ್ತಿ ಗವಾಯಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವವರ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಬೇಕು. ಅಂತಹವರ ಮಾಹಿತಿಯನ್ನು ಸಂಗ್ರಹಿಸಿ, ಅವರ ವಿರುದ್ಧ ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್‌ಗೆ ಪತ್ರ ಬರೆದು ನ್ಯಾಯಾಂಗ ನಿಂದನೆಯ ಕಾನೂನು ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲದೆ, ರಾಕೇಶ್ ಕಿಶೋರ್‌ನ ಕೃತ್ಯವನ್ನು ಸಮರ್ಥಿಸುವ ಮತ್ತು ಅದನ್ನು ವೈಭವೀಕರಿಸುವವರ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಕಾನೂನು ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಅವರು ರಾಜ್ಯದ ಅಡ್ವೊಕೇಟ್ ಜನರಲ್ ಶಶಿ ಕುಮಾರ್ ಶೆಟ್ಟಿ ಅವರಿಗೂ ಆಗ್ರಹಿಸಿದ್ದಾರೆ.
ಶೂ ಎಸೆದ ಘಟನೆಯು ಸಂವಿಧಾನ ವಿರೋಧಿ ಹಾಗೂ ಭಯೋತ್ಪಾದಕ ಚಟುವಟಿಕೆಯಾಗಿದೆ ಎಂದು ಮನೋರಾಜ್ ರಾಜೀವ್ ಅಭಿಪ್ರಾಯಪಟ್ಟಿದ್ದಾರೆ. ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಶೂ ಎಸೆದಾತನನ್ನು ಕ್ಷಮಿಸಿರಬಹುದು. ಆದರೆ ಆತನ ಕೃತ್ಯ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗೆ ಮಾಡಿದ ಅಪಮಾನವಾಗಿದೆ. ಇದರಿಂದಾಗಿ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಬಂದಿದೆ. ಹಾಗಾಗಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.







