ಇಂಜಿನಿಯರಿಂಗ್, ವಾಸ್ತುಶಿಲ್ಪ ಕೋರ್ಸ್ಗಳಿಗೆ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಪ್ರಕಟ : 245 ಕಾಲೇಜುಗಳಲ್ಲಿ 1.51 ಲಕ್ಷ ಸೀಟುಗಳು ಲಭ್ಯ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯ ತಾಂತ್ರಿಕ ಶಿಕ್ಷಣ ಮತ್ತು ಯೋಜನೆ ವಿಭಾಗವು ರಾಜ್ಯದ ಇಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್ಗಳಿಗೆ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಪಟ್ಟಿಯನ್ನು ಪ್ರಕಟಿಸಿದ್ದು, 2025-26ನೇ ಶೈಕ್ಷಣಿಕ ವರ್ಷಕ್ಕೆ 245 ಇಂಜಿನಿಯರಿಂಗ್ ಕಾಲೇಜುಗಳಿಂದ 1,51,436 ಸೀಟುಗಳು ಲಭ್ಯ ಇದೆ.
ಒಟ್ಟು ಸೀಟುಗಳ ಪೈಕಿ ಸರಕಾರಿ ಕೋಟಾದಡಿಯಲ್ಲಿ 71,303 ಸೀಟುಗಳು, ಕಾಮೆಡ್-ಕೆ ಕೋಟಾದಡಿ 31,703 ಸೀಟುಗಳು ಮತ್ತು ಸೂಪರ್ ನ್ಯೂಮರರಿ ಕೋಟಾದಡಿಯಲ್ಲಿ 5,765 ಸೀಟುಗಳು ಇವೆ. ಉಳಿದ ಸೀಟುಗಳು ಮ್ಯಾನೇಜ್ಮೆಂಟ್ ಸೀಟಿಗಳಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಒಟ್ಟು ಇಂಜಿನಿಯರಿಂಗ್ ಸೀಟುಗಳ ಸಂಖ್ಯೆ 10,427 ರಷ್ಟು ಹೆಚ್ಚಾಗಿದೆ. 2024-25 ಶೈಕ್ಷಣಿಕ ವರ್ಷದಲ್ಲಿ ಒಟ್ಟು 1,41,009 ಸೀಟುಗಳು ಲಭ್ಯವಿದ್ದವು.
ಪ್ರತಿ ವರ್ಷದಂತೆ, ಈ ವರ್ಷವೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್(ಸಿಎಸ್ಇ) ಕೋರ್ಸ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳಿವೆ. ಈ ಬಾರಿ ಒಟ್ಟು 38,178 ಸಿಎಸ್ಇ ಸೀಟುಗಳು ಲಭ್ಯವಿದ್ದು, ಹಿಂದಿನ ವರ್ಷ 33,573 ಸಿಎಸ್ಇ ಸೀಟುಗಳಿದ್ದವು. ಈ ವರ್ಷ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ನಲ್ಲಿ 20,208 ಸೀಟುಗಳು, ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ನಲ್ಲಿ 9,108 ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ 8,960 ಸೀಟುಗಳು ಲಭ್ಯವಿದೆ.
ಪ್ರಸಕ್ತ ಸಾಲಿನಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 6,255 ಸೀಟುಗಳು ಲಭ್ಯವಿದ್ದರೇ, ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 2,950 ಸೀಟುಗಳು ಇವೆ. ಹಾಗೆಯೇ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ 95,236 ಸೀಟುಗಳು ಮತ್ತು ಅಲ್ಪಸಂಖ್ಯಾತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 10,440 ಸೀಟುಗಳು ಲಭ್ಯವಿದೆ.
ವಿಶ್ವೇಶ್ವರಯ್ಯ ಕಾಲೇಜು ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ(ಯುವಿಸಿಇ) 760 ಸೀಟುಗಳು, ಖಾಸಗಿ ವಿಶ್ವವಿದ್ಯಾಲಯಗಳಲ್ಲಿ 33,120 ಸೀಟುಗಳು, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ 2,280 ಸೀಟುಗಳು ಮತ್ತು ಸರಕಾರಿ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕದೊಂದಿಗೆ 395 ಸೀಟುಗಳು ಲಭ್ಯವಿದೆ.
ಹಿಂದಿನ ವರ್ಷ 2.74 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದರು. ಈ ಬಾರಿ 2,75,677 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ-2025) ಅರ್ಹತೆ ಪಡೆದಿದ್ದಾರೆ. 2,62,195 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಸ್ಟ್ರೀಮ್ಗೆ ಅರ್ಹತೆ ಪಡೆದಿದ್ದಾರೆ.
ನೀಟ್ ಅಂಕಗಳ ಆಧಾರದಲ್ಲಿ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ಸೀಟು ಹಂಚಿಕೆಯ ಮೊದಲ ಸುತ್ತು ಮುಗಿಯುತ್ತಿದ್ದಂತೆ ಎಂಜಿನಿಯರಿಂಗ್ ಸೇರಿದಂತೆ ಇತರೆ ವೃತ್ತಿ ಶಿಕ್ಷಣ ಕೋರ್ಸ್ಗಳ ಸೀಟು ಹಂಚಿಕೆ ನಡೆಯಲಿದೆ.