ಅತಿಕ್ರಮ ಪ್ರವೇಶಿಸಿ ಖಾಲಿ ಜಾಗ ಕಬಳಿಸಿದ ಆರೋಪ : ನಟ ಮಯೂರ್ ಪಟೇಲ್ ಸೇರಿ ಹಲವರ ವಿರುದ್ಧ ಎಫ್ಐಆರ್

ನಟ ಮಯೂರ್
ಬೆಂಗಳೂರು : ಅತಿಕ್ರಮವಾಗಿ ಪ್ರವೇಶಿಸಿ ಅಪರಿಚಿತರಿಂದ ಕಾಂಪೌಂಡ್ ಅನ್ನು ಒಡೆಸಿ ಜಾಗವನ್ನು ಸ್ವಾಧೀನ ಪಡಿಸಿಕೊಂಡ ಆರೋಪದಡಿ ಚಿತ್ರನಟ ಮಯೂರ್ ಪಟೇಲ್ ಸೇರಿ ಹಲವರ ವಿರುದ್ಧ ಇಲ್ಲಿನ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ಶಾಲಿನಿ ಎಂಬುವರು ನೀಡಿದ ದೂರಿನನ್ವಯ ಸುಬ್ರಮಣ್ಯ ಮಾಸ್, ಎನ್.ಆರ್.ಭಟ್ ಹಾಗೂ ನಟ ಮಯೂರ್ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ದೂರುದಾರ ಮಹಿಳೆ ಶಾಲಿನಿ ಅವರು ಸೋಮಸುಂದರಪಾಳ್ಯದಲ್ಲಿ ವಾಸವಾಗಿದ್ದು, ಬೇಗೂರು ಹೋಬಳಿಯ ಹರಳುಕುಂಟೆ ಗ್ರಾಮದ ಸರ್ವೇ ನಂಬರ್ 55/10 ರಲ್ಲಿ 14.5 ಗುಂಟೆ ಜಾಗವು ಪತಿ ಮಂಜುನಾಥ್ ರೆಡ್ಡಿಗೆ ದಾನವಾಗಿ ಬಂದಿರುತ್ತದೆ. ಈ ಸ್ವತ್ತಿಗೆ ಸುತ್ತಲೂ ಕಾಂಪೌಂಡ್ ಹಾಕಲಾಗಿತ್ತು. ನ್ಯಾಯಾಲಯದಲ್ಲಿ ಎನ್.ಆರ್ ಭಟ್ ಹಾಗೂ ಮಯೂರ್ ಪಟೇಲ್ ಹೂಡಿದ್ದ ದಾವೆ ಸಂಬಂಧ ಸಿವಿಲ್ ನ್ಯಾಯಾಲಯವು ಸ್ವತ್ತಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು.
ಹೀಗಿದ್ದರೂ ಅ.19ರಂದು ಸುಮಾರು 50ರಿಂದ 75 ಮಂದಿಯನ್ನು ಕರೆದುಕೊಂಡು ಬಂದು ಜೆಸಿಬಿ ಮೂಲಕ ಕಾಂಪೌಂಡ್ ಉರುಳಿಸಿದ್ದಾರೆ. ಈ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ. ಅತಿಕ್ರಮ ಪ್ರವೇಶಿಸಿ ಕಾಂಪೌಂಡ್ ಉರುಳಿಸಿದ್ದಾರೆ. ಸುಮಾರು 5ರಿಂದ 10 ಲಕ್ಷ ನಷ್ಟವಾಗಿರುವುದಾಗಿ ದೂರಿನಲ್ಲಿ ಶಾಲಿನಿ ಅವರು ಉಲ್ಲೇಖಿಸಿದ್ದಾರೆ.





