ಕಾರು ಚಾಲಕ ಬಾಬು ಆತ್ಮಹತ್ಯೆ | ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಸಹಿತ ಮೂವರ ವಿರುದ್ಧ ಎಫ್ಐಆರ್

ಡಾ.ಕೆ.ಸುಧಾಕರ್/ಬಾಬು
ಚಿಕ್ಕಬಳ್ಳಾಪುರ ಆ.7 : ಹೊರಗುತ್ತಿಗೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರು ಚಾಲಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಕೆ.ಸುಧಾಕರ್ ಸಹಿತ ಮೂವರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಬಾಬು ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ನಾಗೇಶ್ ಮತ್ತು ಮಂಜುನಾಥ್ ಎಂಬವರ ವಿರುದ್ಧವೂ ಬಿಎನ್ಎಸ್ ಕಾಯ್ದೆಯಡಿ ಸೆಕ್ಷನ್ 108, 352, 351 ಹಾಗೂ ಎಸ್ಸಿ, ಎಸ್ಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಸಂಸದ ಸುಧಾಕರ್ ಎ1 ಆರೋಪಿದ್ದಾರೆ.
ನಗರದ ಬಾಪೂಜಿನಗರದ ನಿವಾಸಿ ಬಾಬು(33) ಮೃತ ಚಾಲಕ. ಜಿ.ಪಂ ಮುಖ್ಯ ಲೆಕ್ಕಾಧಿಕಾರಿಯ ಹೊರಗುತ್ತಿಗೆಯ ಕಾರು ಚಾಲಕನಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಬೆಳಗ್ಗೆ ಜಿ.ಪಂ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರಕಾರಿ ಕಾರು ನಿಲ್ಲಿಸಿ ಅದರ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾರೆೆ.
ದೂರಿನಲ್ಲೇನಿದೆ?:
ಕೆ.ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ಎಂಬವರು ತನ್ನ ಪತಿ ಬಾಬು ಅವರಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಮೋಸದಿಂದ ಹಣ ಪಡೆದುಕೊಂಡಿರುತ್ತಾರೆ. ಈ ಎಲ್ಲ ಹಣವನ್ನು ಬೇರೆಯವರ ಕಡೆಯಿಂದ ಸಾಲ ಮಾಡಿ ಕೊಟ್ಟಿರುತ್ತಾರೆ. ಆದರೆ ಕೆಲಸ ಮಾಡಿಕೊಡದೆ ಇದ್ದಾಗ, ಬಾಬು ಅನೇಕ ಬಾರಿ ಈ ಬಗ್ಗೆ ವಿಚಾರಿಸಿದಾಗ ನಿಂದನೆ ಮಾಡಿ ಬೆದರಿಕೆಯನ್ನು ಹಾಕಿ ಮಾನಸಿಕವಾಗಿ ಹಿಂಸೆಯನ್ನು ನೀಡಿರುತ್ತಾರೆ. ನಾವು ದಲಿತ ಜನಾಂಗದವರಾಗಿರುವುದರಿಂದ ನನ್ನ ಗಂಡನಿಂದ 35 ಲಕ್ಷ ರೂ. ಪಡೆದುಕೊಂಡು ಸರಕಾರಿ ಕೆಲಸವನ್ನ್ನೂ ಮಾಡಿಕೊಡದೆ ಮಾನಸಿಕವಾಗಿ ನಿಂದನೆ ಮಾಡಿರುವುದರಿಂದ ಬೇಸತ್ತು ನನ್ನ ಗಂಡ ಬಾಬು ಮನನೊಂದುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾದ ಕೆ ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಬಾಬು ಅವರ ಪತ್ನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಬಾಬು ಯಾರು ಅಂತ ಗೊತ್ತಿಲ್ಲ :
ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದ ಕೆ.ಸುಧಾಕರ್, ಬಾಬು ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ, ಆತನ ಮುಖವನ್ನೇ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ಬಾಬು ಅನ್ನೋ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿ ಎಂದು ಗೊತ್ತಾಗಿದೆ . ಆತ್ಮಹತ್ಯೆಗೆ ಶರಣಾಗಿರುವುದು ಜಿಲ್ಲಾ ಪಂಚಾಯತ್ ಆವರಣದಲ್ಲಿ. ಮೊದಲು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ. ಮೊದಲನೆಯದಾಗಿ ನನಿಗೆ ಈ ಸಾವು ದುಃಖ ತಂದಿದೆ. ನನ್ನ ಸಾರ್ವಜನಿಕ ಜೀವನದಲ್ಲಿ ಈ ಬಾಬು ಅನ್ನೋ ವ್ಯಕ್ತಿಯನ್ನು ಭೇಟಿ ಆಗಿಲ್ಲ. ನಾನು ಎರಡು ಬಾರಿ ಸಚಿವ ಆಗಿದ್ದೇನೆ, ಶಾಸಕ ಆಗಿದ್ದೇನೆ . ಈ ಸಮಯದಲ್ಲಿ ಹಲವರಿಗೆ ಕೆಲಸ ಕೊಡಿಸಿದ್ದೇನೆ, ಆದರೆ ಈ ವ್ಯಕ್ತಿ ನನಗೆ ಯಾರೂ ಅಂತ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.







