ವರದಕ್ಷಿಣೆ ಕಿರುಕುಳ ಆರೋಪ : ನಿರ್ದೇಶಕ ಎಸ್.ನಾರಾಯಣ್ ಸಹಿತ ಮೂವರ ವಿರುದ್ಧ ಎಫ್ಐಆರ್

ಎಸ್.ನಾರಾಯಣ್
ಬೆಂಗಳೂರು, ಸೆ. 11: ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ನಟ, ನಿರ್ದೇಶಕ ಎಸ್.ನಾರಾಯಣ್ ಹಾಗೂ ಅವರ ಪತ್ನಿ, ಪುತ್ರನ ವಿರುದ್ಧ ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಎಸ್.ನಾರಾಯಣ್ ಅವರ ಎರಡನೇ ಪುತ್ರ ಪವನ್ ಪತ್ನಿ ಪವಿತ್ರಾ ನೀಡಿರುವ ದೂರಿನನ್ವಯ ನಾರಾಯಣ್, ಪತ್ನಿ ಭಾಗ್ಯವತಿ ಹಾಗೂ ಪುತ್ರ ಪವನ್ ವಿರುದ್ಧ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ವಿವರ: ‘2021ರಲ್ಲಿ ಎಸ್.ನಾರಾಯಣ್ ಪುತ್ರ ಪವನ್ ಹಾಗೂ ಪವಿತ್ರಾ ವಿವಾಹವಾಗಿತ್ತು. ಮದುವೆಯಲ್ಲಿ 1ಲಕ್ಷ ರೂ.ಮೌಲ್ಯದ ಉಂಗುರ, ಮದುವೆ ಖರ್ಚನ್ನು ನಮ್ಮ ಪೋಷಕರೇ ನೋಡಿಕೊಂಡಿದ್ದರು. ಮದುವೆಯಾದ 3 ತಿಂಗಳ ನಂತರ ಅತ್ತೆ, ಮಾವ ನನ್ನ ಜೊತೆ ಜಗಳವಾಡಿದರು. ಜಗಳಕ್ಕೆ ಕಾರಣ ನಾನೇ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
2022ರಲ್ಲಿ ನಾನು ಹಾಗೂ ನನ್ನ ಗಂಡ ಪ್ರತ್ಯೇಕ ಮನೆ ಮಾಡಿಕೊಂಡು ವಾಸವಿದ್ದೆವು. ಪವನ್ ಕೆಲಸ ಇಲ್ಲದೆ, ಮನೆಯಲ್ಲಿಯೇ ಇದ್ದಿದ್ದರಿಂದ ನಾನೇ ನಮ್ಮ ಮನೆಯ ಖರ್ಚು ವೆಚ್ಚ ನೋಡಿಕೊಂಡಿದ್ದೆ. ಅಲ್ಲದೆ, ಕಾರು ಖರೀದಿಸಲು ಪವನ್ ಹಣ ಕೇಳಿದಾಗ 1ಲಕ್ಷ ರೂ. ನೀಡಿದ್ದೆ. ಅಲ್ಲದೆ, ನನ್ನ ತಾಯಿಯ ಬಳಿಯೂ ಪವನ್ 75 ಸಾವಿರ ರೂ. ಪಡೆದಿದ್ದಾರೆ’ ಎಂದು ದೂರಿನಲ್ಲಿ ಪವಿತ್ರಾ ಉಲ್ಲೇಖಿಸಿದ್ದಾರೆ.
‘ನಮಗೆ ಮಗುವಾದ ಮೂವರು ತಿಂಗಳ ಬಳಿಕ ನಮ್ಮ ಮಾವನವರೇ(ಎಸ್.ನಾರಾಯಣ್) ಬಂದು ಮನೆಗೆ ಬರುವಂತೆ ಕರೆದಿದ್ದರಿಂದ ಪುನಃ ಗಂಡನ ಜೊತೆಗೆ ಅವರ ಮನೆಗೆ ಹೋಗಿದ್ದೆವು. ಆದರೆ, ಅಲ್ಲಿಗೆ ಹೋದ ಬಳಿಕ ಗಂಡ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಹಾಗೂ ಹಿಂಸೆ ನೀಡಲು ಆರಂಭಿಸಿದರು. ಹೀಗಾಗಿ, ನಾನು ನನ್ನ ಮಗುವನ್ನು ತಾಯಿಯ ಮನೆಯಲ್ಲಿ ಬಿಟ್ಟು ಬಂದಿದ್ದೆ.
ಇದಾದ ಬಳಿಕ ಪವನ್ ಅವರು ತಮ್ಮ ತಂದೆಯ ಹೆಸರಲ್ಲಿ ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭಿಸಿದ್ದರು. ಆಗ ಹಣ ಕೇಳಿದಾಗ ನಾನು ನನ್ನ ತಾಯಿಯ ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ. ನಂತರ ಇನ್ಸ್ಟಿಟ್ಯೂಟ್ ನಷ್ಟಕ್ಕೀಡಾದಾಗ ಮತ್ತೆ ಹಣ ಕೇಳಿದ್ದು, ಸಾಲ ಪಡೆದು 10 ಲಕ್ಷ ರೂ. ನೀಡಿದ್ದೆ. ಆದರೆ, 5 ತಿಂಗಳ ಬಳಿಕ ಸಾಲದ ಮರುಪಾವತಿ ಕಂತು ಪಾವತಿಸದೆ, ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ’ ಎಂದು ಪವಿತ್ರಾ ದೂರಿನಲ್ಲಿ ಆರೋಪಿಸಿದ್ದಾರೆ.
‘ಬಳಿಕ ನಾನು ಅವರ ಮನೆಯ ಬಳಿ ಅನೇಕ ಸಲ ಹೋದರೂ ಸೆಕ್ಯೂರಿಟಿಯವರು ಮನೆಯಲ್ಲಿ ಯಾರೂ ಇಲ್ಲ ಎಂದು ಹೇಳುತ್ತಿದ್ದಾರೆ. ನನಗೆ ಹಾಗೂ ನನ್ನ ಮಗುವಿಗೆ ಏನಾದರೂ ಆದರೆ, ಅದಕ್ಕೆ ಎಸ್.ನಾರಾಯಣ್, ಅವರ ಪತ್ನಿ ಹಾಗೂ ನನ್ನ ಗಂಡ ಪವನ್ ಕಾರಣರಾಗಿರುತ್ತಾರೆ. ನನಗೆ ಬೈದು, ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಿದ ಈ ಮೂವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪವಿತ್ರಾ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
ಪವಿತ್ರಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಎಸ್.ನಾರಾಯಣ್, ಅವರ ಪತ್ನಿ ಹಾಗೂ ಪುತ್ರನಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲಾಗುವುದು ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆರೋಪ ಸತ್ಯಕ್ಕೆ ದೂರ: ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಎಸ್.ನಾರಾಯಣ್, ‘ನನ್ನ ಸೊಸೆ ಮನೆಬಿಟ್ಟು ಹೋಗಿ 14 ತಿಂಗಳಾಗಿವೆ. ಮನೆ ಬಿಟ್ಟು ಹೋದ ಕೂಡಲೇ ದೂರು ಕೊಡಬಹುದಿತ್ತು. ಏಕಿಷ್ಟು ವಿಳಂಬ ಮಾಡಿದರೋ ಗೊತ್ತಿಲ್ಲ. ವರದಕ್ಷಿಣೆ ಪಿಡುಗು ತೊಲಗಬೇಕೆಂದು ಸಿನಿಮಾ ಮಾಡಿದವನು ನಾನು, ಆದರೆ, ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಈ ಆರೋಪ ಸತ್ಯಕ್ಕೆ ದೂರವಾಗಿದೆ’ ಎಂದು ಸ್ಪಷ್ಟನೆ ನೀಡಿದರು.







