ಸುಳ್ಳು ಸುದ್ದಿ ಹರಡಿದ ಆರೋಪ; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಎಫ್ಐಆರ್

ಶಕುಂತಲಾ- ಬಿಜೆಪಿ ಕಾರ್ಯಕರ್ತೆ
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಎಂಎಲ್ಸಿ ಜಗದೇವ ಗುತ್ತೇದಾರ್ ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಶಕುಂತಲಾ ನಟರಾಜ್ ಹಾಗೂ ಬಿಜೆಪಿ ಕರ್ನಾಟಕ ಫೇಸ್ಬುಕ್ ಹಾಗೂ ಎಕ್ಸ್ ಖಾತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
"ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಧಾರರಹಿತ ಸುಳ್ಳು ಆರೋಪ ಮಾಡಲಾಗಿದೆ. ಯಾದಗಿರಿ ಕ್ರೀಡಾಂಗಣ ಸರಿಪಡಿಸಿ ಎಂದು ಕೇಳಿಕೊಂಡಿದ್ದಕ್ಕೆ ರಾಷ್ಟ್ರ ಮಟ್ಟದ ಕ್ರೀಡಾಪಟುವಿನ ಮೇಲೆ ಕೇಸ್ ಹಾಕಿಸಿದ ಮಹಾನುಭಾವ ಪ್ರಿಯಾಂಕ್ ಖರ್ಗೆ ಎಂದು ಬರೆದು ಸಚಿವರ ವಿರುದ್ಧ ದ್ವೇಷ ಪ್ರಚೋದಿಸಿದ್ದಾರೆ. ಇದಲ್ಲದೆ ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ" ಎಂದು ಜಗದೇವ್ ಗುತ್ತೇದಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.





