ಜಾನಪದ ಕಲಾವಿದನಿಗೆ ಜಾತಿ ನಿಂದನೆ, ಹಲ್ಲೆ ಆರೋಪ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ವಿರುದ್ಧ ಎಫ್‍ಐಆರ್ ದಾಖಲು

ಬೆಂಗಳೂರು: ಹಿರಿಯ ಜಾನಪದ ಕಲಾವಿದ ಡಾ.ಜೋಗಿಲ ಸಿದ್ದರಾಜು ಅವರಿಗೆ ಜಾತಿನಿಂದನೆ ಮಾಡಿ, ಹಲ್ಲೆಗೈದ ಆರೋಪದಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರ ವಿರುದ್ಧ ಇಲ್ಲಿನ ಎಸ್.ಜೆ.ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಜಾನಪದ ಕಲಾವಿದ ಡಾ.ಜೋಗಿಲ ಸಿದ್ದರಾಜು ಅವರು ನೀಡಿದ ದೂರಿನನ್ವಯ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಕೆ.ಎಂ.ಗಾಯತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಮೂರು ವರ್ಷದ ಜಾನಪದ ಕಲಾವಿದರ ಪ್ರಾಯೋಜನೆ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿ ಮಾಡಲು ಜುಲೈ 11ರಂದು ತೆರಳಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಗಾಯತ್ರಿ ಅವರು ನನ್ನ ಜಾತಿ ನಿಂದಿಸಿ, ಮೊಬೈಲ್ ಕಸಿದು ಹಲ್ಲೆ ಮಾಡಿದ್ದಾರೆ ಎಂದು ಜೋಗಿಲ ಸಿದ್ದರಾಜು ಆರೋಪಿಸಿದ್ದಾರೆ.
ದೂರಿನ ವಿವರ:
‘ನಾನು ಮೂಲತಃ ಜಾನಪದ ಕಲಾವಿದ. ಸುಮಾರು 35 ವರ್ಷಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಕಾರ್ಯಕ್ರಮಗಳು, ಸರಕಾರೇತರ ಕಾರ್ಯಕ್ರಮಗಳು ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾರ್ಯಕ್ರಮಗಳನ್ನು ನೀಡಿ ನನ್ನದೇ ಆದ ವ್ಯಕ್ತಿತ್ವ ಹೊಂದಿದ್ದೇನೆ. ಜುಲೈ 11ರಂದು ಶುಕ್ರವಾರ ಸಂಜೆ 4:30ರ ಸುಮಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಕಚೇರಿಗೆ ಕಳೆದ ಮೂರು ವರ್ಷಗಳಿಂದ ಬಾಕಿ ಇರುವ ಪ್ರಾಯೋಜಿತ ತಂಡಗಳ ಸಂಭಾವನೆ ಕೇಳಲು ಹೋಗಿದ್ದೆ. ಈ ವೇಳೆ ನಾನು ದಲಿತ ಕಲಾವಿದನೆಂದು ತಿಳಿದು ಕೆ.ಎಂ.ಗಾಯತ್ರಿ ಅವರು ‘ನಿಮ್ಮಂತಹವರಿಂದ ನಾನು ಆಡಳಿತ ಕಲಿಯಬೇಕಾಗಿಲ್ಲ’ ಎಂದು ಬಹಳ ದೌರ್ಜನ್ಯದಿಂದ ವರ್ತಿಸಿದರು.
ನಾನು ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದಾಗ ಏಕಾಏಕಿ ಮೇಜಿನ ಮೇಲಿದ್ದ ಕಂಪ್ಯೂಟರ್ ಮೌಸ್ ಪ್ಯಾಡ್ ತೆಗೆದು ನನ್ನ ಮೇಲೆ ಎಸೆದು ಹಲ್ಲೆ ನಡೆಸಿದ್ದಾರೆ. ನನ್ನ ಜೊತೆಗೆ ಬಂದ ಸಹ ಕಲಾವಿದ ಡಾ.ಕೆ.ಎನ್.ನಾಗೇಶ್ ಅವರು ತಮ್ಮ ಮೊಬೈಲ್‍ನಲ್ಲಿ ಈ ಅನುಚಿತ ವರ್ತನೆಯನ್ನು ವಿಡಿಯೋ ಚಿತ್ರಿಕರಣ ಮಾಡಲು ಮುಂದಾದಾಗ ಅವರ ಮೇಲೆ ಬಿದ್ದು ಮೊಬೈಲ್ ಕಸಿದು ಹಲ್ಲೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
‘ಆದ್ದರಿಂದ ಕಚೇರಿ ಒಳಗಿರುವ ಸಿಸಿಟಿವಿ ಕ್ಯಾಮರಾ ತೆಗೆದು ನೋಡಿದರೆ ಘಟನೆಯ ಸತ್ಯಾಂಶ ತಿಳಿಯುತ್ತದೆ. ಗಾಯತ್ರಿ ಅವರು ಒಬ್ಬ ದಲಿತ ಕಲಾವಿದನಿಗೆ ಜಾತಿನಿಂದನೆ ಮಾಡಿ ಸಾರ್ವಜನಿಕ ಕಚೇರಿಯಲ್ಲಿ ಹಲ್ಲೆ ನಡೆಸಿದಕ್ಕಾಗಿ ಜುಲೈ 14ರಂದು ಇಲಾಖೆ ವ್ಯಾಪ್ತಿಯಲ್ಲಿ ಸಂಧಾನ ಸಭೆ ಸೇರಿ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದರು. ಅಂದು ನಾವು ಸಂಧಾನ ಸಭೆಗೆ ಬಂದಾಗ ಸಂಬಂಧಪಟ್ಟ ಗಾಯತ್ರಿ ಅವರು ಕನ್ನಡ ಸಂಸ್ಕೃತಿ ಕಚೇರಿಗೆ ಗೈರುಹಾಜರಾಗಿದ್ದು, ನಾವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ಹಾಗಾಗಿ ತಡವಾಗಿ ಬಂದು ದೂರು ನೀಡುತ್ತಿದ್ದು, ಕಾನೂನು ರೀತಿ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.







