ಬೆಂಗಳೂರು | ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಅಗ್ನಿ ಅವಘಡ : ಒಂದೇ ಕುಟುಂಬದ ನಾಲ್ವರ ಸಹಿತ ಐವರು ಮೃತ್ಯು

ಬೆಂಗಳೂರು, ಆ.16: ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿ, ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯಲ್ಲಿ ಶನಿವಾರ ನಡೆದಿದೆ.
ಮದನ್ ಕುಮಾರ್(36), ಸಂಗೀತಾ(33), ಮಿಥೇಶ್(8), ವಿಹಾನ್(5) ಎಂಬುವರು ಮೃತಪಟ್ಟ ಒಂದೇ ಕುಟುಂಬದವರಾಗಿದ್ದು, ಮತ್ತೊಂದು ಮಹಡಿಯಲ್ಲಿದ್ದ ಸುರೇಶ್(30) ಎಂಬವರೂ ಸುಟ್ಟು ಕರಕಲಾಗಿದ್ದಾರೆ.
ಆ.19ರ ಶನಿವಾರ ಮುಂಜಾನೆ 3.30ರ ಸುಮಾರಿಗೆ ನಗರ್ತಪೇಟೆಯಲ್ಲಿ ಕಟ್ಟಡದ ನೆಲಮಹಡಿಯ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಸಂದೀಪ್ ಮತ್ತು ಬಾಲಕೃಷ್ಣ ಎಂಬುವವರ ಒಡೆತನಕ್ಕೆ ಸೇರಿದ ನಾಲ್ಕು ಅಂತಸ್ತಿನ ಕಟ್ಟಡ ಇದಾಗಿದ್ದು, ನೆಲಮಹಡಿ ಸೇರಿ ಎರಡು ಮಹಡಿಯಲ್ಲಿ ಗೋದಾಮು ಇದೆ. ಮೊದಲ ಮಹಡಿಯಲ್ಲಿ ಮಲಗಿದ್ದ ಕಾರ್ಮಿಕ ಸುರೇಶ್ ಸಜೀವ ದಹನಗೊಂಡಿದ್ದಾರೆ.
ಮೂರನೇ ಮಹಡಿಯಲ್ಲಿ ಮದನ್ ಕುಮಾರ್, ಪತ್ನಿ ಸಂಗೀತಾ, ಮಕ್ಕಳಾದ ವಿಹಾನ್ ಹಾಗೂ ನಿತೇಶ್ ವಾಸವಿದ್ದರು. ಘಟನೆಯಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ. ಐದು ಮಂದಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆಯಲ್ಲಿ ಮೃತಪಟ್ಟ ಐವರೂ ಹೊರ ರಾಜ್ಯಗಳಿಂದ ಬಂದವರು, ನಗರದಲ್ಲಿ ಕಟ್ಟಡ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ 6 ಅಗ್ನಿಶಾಮಕ ವಾಹನಗಳು, 50ಕ್ಕೂ ಅಧಿಕ ಸಿಬ್ಬಂದಿ, ಎಸ್‍ಡಿಆರ್‌ಎಫ್, ಪೊಲೀಸ್ ಸಿಬ್ಬಂದಿಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಲಾಯಿತು. ಘಟನೆಗೆ ನಿಖರ ಕಾರಣ ಏನು ಎಂದು ತಿಳಿಯಬೇಕಿದ್ದು, ಕಟ್ಟಡದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿರುವುದರ ಬಗ್ಗೆ ತಪಾಸಣೆ ನಡೆಸಲಾಗುತ್ತದೆ ಎಂದು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ನಿರ್ದೇಶಕ ಶಿವಶಂಕರ್ ತಿಳಿಸಿದ್ದಾರೆ.
‘ಅಗ್ನಿ ಅವಗಢ ಸಂಭವಿಸಿದ ಸ್ಥಳದಲ್ಲಿ ಅಗ್ನಿಶಾಮಕ ದಳದವರು, ಪೊಲೀಸರು ಪರಿಶೀಲನೆ ಮಾಡಿ ಕ್ರಮ ಕೈಗೊಂಡಿದ್ದಾರೆ. ನೆಲಮಹಡಿಯಲ್ಲಿರುವ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಅದು ಮೇಲಿನ ಮಹಡಿಗಳಿಗೆ ಆವರಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಟ್ಟಡದಲ್ಲಿದ್ದ ಬಹುತೇಕ ಜನ ಓಡಿ ಹೋಗಿದ್ದಾರೆ. ಆದರೆ ಒಂದು ಕುಟುಂಬದ ನಾಲ್ವರು ಮತ್ತೊಬ್ಬ ಸೇರಿ ಐವರು ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಈ ಘಟನೆಯ ಕಾರಣ ಏನೆಂಬುದು ವಿಚಾರಣೆ ಬಳಿಕ ತಿಳಿದು ಬರಲಿದೆ’
-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ







