ಆಹಾರ ಸುರಕ್ಷತೆ-ಗುಣಮಟ್ಟ ನಿಯಮ ಉಲ್ಲಂಘನೆ: 15 ಸಿಹಿ ತಿಂಡಿ ತಯಾರಿಕಾ ಘಟಕಗಳಿಗೆ ನೋಟಿಸ್ ಜಾರಿ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮ ಉಲ್ಲಂಘನೆ ಅಡಿಯಲ್ಲಿ 15 ಸಿಹಿ ತಿಂಡಿ ತಯಾರಿಕಾ ಘಟಕಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, 2 ಆಹಾರ ಉದ್ದಿಮೆದಾರರಿಗೆ ಒಟ್ಟು 7 ಸಾವಿರ ರೂ. ದಂಡ ವಿಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.
ಶುಕ್ರವಾರ ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಇಲಾಖೆಯು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅನ್ವಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಶುಕ್ರವಾರ ರಾಜ್ಯದ ಒಟ್ಟು 90 ಸಿಹಿ ತಿಂಡಿ ತಯಾರಿಕಾ ಘಟಕಗಳು ಹಾಗೂ ಮಾರಾಟ ಮಳಿಗೆಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಹೇಳಿದೆ.
ಈ ವಿಶೇಷ ತಪಾಸಣೆಯ ಸಂದರ್ಭದಲ್ಲಿ ಸಿಹಿ ತಿಂಡಿ ತಯಾರಿಕಾ ಮತ್ತು ಮಾರಾಟ ಮಳಿಗೆಗಳಲ್ಲಿ ಒಟ್ಟು 145 ಆಹಾರ ಮಾದರಿಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟ ಹಾಗೂ ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುವ ಸಲುವಾಗಿ ಸಂಬಂಧಿತ ಸರಕಾರಿ ಆಹಾರ ಪ್ರಯೋಗಾಲಯಗಳಿಗೆ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ.
ತಪಾಸಣೆಯ ಸಂದರ್ಭದಲ್ಲಿ ಆಹಾರ ತಯಾರಿಕಾ ಹಾಗೂ ಸಂಗ್ರಹಣಾ ಪ್ರದೇಶಗಳನ್ನು ಅನೈರ್ಮಲ್ಯಕರ ಪರಿಸ್ಥಿತಿಯಲ್ಲಿ ನಿರ್ವಹಿಸುತ್ತಿರುವುದು, ಆಹಾರ ನಿರ್ವಹಣಾ ಸಿಬ್ಬಂದಿಯು ವೈದ್ಯಕೀಯ ಪ್ರಮಾಣಪತ್ರಗಳನ್ನು ಹೊಂದಿರದಿರುವುದು ಹಾಗೂ ಲೇಬಲಿಂಗ್ಗೆ ಸಂಬಂಧಿಸಿದ ದೋಷಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ, 15 ಸಿಹಿ ತಿಂಡಿ ತಯಾರಿಕಾ ಘಟಕಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, 2 ಆಹಾರ ಉದ್ದಿಮೆದಾರರಿಗೆ ಒಟ್ಟು 7,000 ರೂ. ದಂಡ ವಿಧಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸುವ ಯಾವುದೇ ಸಿಹಿ ತಿಂಡಿ ತಯಾರಿಕಾ ಮತ್ತು ಮಾರಾಟ ಮಳಿಗೆಗಳ ವಿರುದ್ಧ ನಿರಂತರವಾಗಿ ತಪಾಸಣೆ ನಡೆಸಲಾಗುವುದು ಹಾಗೂ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ.






