ಅರಣ್ಯ ಇಲಾಖೆಯಿಂದ ಆನೆ ಕಾರ್ಯಾಚರಣೆ ವಿವಾದ: ನ.30ರ ಸಭೆ ಬಳಿಕ ನಿರ್ಧಾರ ಪ್ರಕಟಿಸಲು ಮುಂದಾದ ಚಿಕ್ಕಮಗಳೂರಿನ ಶಾಸಕರು

ಟಿ.ಡಿ.ರಾಜೇಗೌಡ/ನಯನಾ ಮೋಟಮ್ಮ
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನ.30ರಂದು ಅರಣ್ಯ ಇಲಾಖೆಯಿಂದ ಆನೆ ಕಾರ್ಯಾಚರಣೆ ಕುರಿತು ಸಭೆ ನಡೆಯಲಿದ್ದು, ಆನಂತರ ಮುಂದಿನ ನಿರ್ಧಾರವನ್ನು ತೀರ್ಮಾನಿಸಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲೆಯ ಮೂವರು ಶಾಸಕರು ಒಕ್ಕೊರಲಿನಿಂದ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ, ಭದ್ರಾ ಅಭಯಾರಣ್ಯಕ್ಕೆ 56 ಕಾಡಾನೆಗಳನ್ನು ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ನಮ್ಮ ಭಾಗದಲ್ಲಿ 400 ಆನೆಗಳಿದ್ದು, ಆನೆ ದಾಳಿಯಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. ಹೊರಗಿನಿಂದ ಮತ್ತೆ ಆನೆಗಳನ್ನು ತಂದು ಬಲಾತ್ಕಾರವಾಗಿ ಮುತ್ತೋಡಿ ಅರಣ್ಯಕ್ಕೆ ಬಿಡುವುದು ಬೇಡ ಎಂದಿದ್ದೇವೆ. ಸದ್ಯ ಸಿಎಂ ಇಲ್ಲದ ಕಾರಣ ಸ್ಪೀಕರ್ ಅವರು ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದಾರೆ. ಅರಣ್ಯ ಸಚಿವರಿಗೂ ಮನವಿ ಮಾಡಿದ್ದು, ನ.30ರ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಹೇಳಿದರು.
ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನಮ್ಮ ಹಾಗೂ ಸ್ಥಳೀಯ ಜನರ ಗಮನಕ್ಕೆ ತಾರದೆ ಆನೆ ಸ್ಥಳಾಂತರ ಕಾರ್ಯಾಚರಣೆ ನಡೆಸಲಾಗಿತ್ತು. ಇದು ತಿಳಿದ ತಕ್ಷಣ ನಾನು ರಾಜೀನಾಮೆ ನೀಡಿದ್ದೆ, ಆದರೆ ಅದು ಅಂಗೀಕಾರವಾಗಿರಲಿಲ್ಲ. ನಮಗೆ ರಾಜೀನಾಮೆಗಿಂತ ಜನರ ಸಮಸ್ಯೆ ಪರಿಹಾರವಾಗುವುದು ಮುಖ್ಯ. ಸದ್ಯ ಸ್ಪೀಕರ್ ಮಧ್ಯಪ್ರವೇಶದ ಬಳಿಕ ಕಾರ್ಯಾಚರಣೆ ನಿಲ್ಲಿಸುವುದಾಗಿ ಅಧಿಕಾರಿಗಳು ಒಪ್ಪಿದ್ದು, ಶೀಘ್ರವೇ ಅಧಿಕೃತ ಘೋಷಣೆ ಮಾಡಲಿದ್ದಾರೆ. ನ. 30ರ ಸಿಎಂ ಸಭೆಯ ಬಳಿಕ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದರು.
ಸಭೆ:ಹಾಸನ ಭಾಗದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ (ಮುತ್ತೋಡಿ ಅರಣ್ಯ) ಸ್ಥಳಾಂತರಿಸುವ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಮಲೆನಾಡು ಭಾಗದ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನ.30ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.






