ನಮೂನೆ-7 ದುರುಪಯೋಗ ಬಗ್ಗೆ ಚುನಾವಣಾ ಆಯೋಗ ದೂರು ಕೊಟ್ಟರೆ ತನಿಖೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ(ಎಸ್‍ಐಆರ್) ಅರ್ಜಿ ನಮೂನೆ-7 ಅನ್ನು ದುರುಪಯೋಗ ಮಾಡಿಕೊಂಡಿರುವ ಕುರಿತು ದೂರುಗಳು ಬಂದಿವೆ. ಆದರೆ ಚುನಾವಣಾ ಆಯೋಗದ ಅಧಿಕಾರಿಗಳು ದೂರು ನೀಡಿದರೆ ಮಾತ್ರ ಸಿಐಡಿ ತನಿಖೆಯಾಗಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಗಳ ಪ್ರಕಾರ ಚುನಾವಣಾ ಆಯೋಗ ದೂರು ನೀಡಬೇಕು. ಆಗ ಮುದ್ರಿತ ಅರ್ಜಿ ನಮೂನೆಗಳು ಹಾಗೂ ಕ್ರಿಮಿನಲ್ ಸಂಚು ಕುರಿತು ತನಿಖೆ ಮಾಡಬಹುದು. ಅದರ ಹೊರತಾಗಿ ಖಾಸಗಿ ವ್ಯಕ್ತಿಗಳು ನೀಡಿರುವ ದೂರನ್ನಾಧರಿಸಿ ಪ್ರತ್ಯೇಕ ಪ್ರಕರಣಗಳೆಂದು ಪರಿಗಣಿಸಲಾಗುವುದು ಎಂದರು.
ಕಾಂಗ್ರೆಸ್ ಸರಳ ಪ್ರಶ್ನೆ ಕೇಳುತ್ತಿದೆ. ಮುದ್ರಿತ ಅರ್ಜಿ ನಮೂನೆಗಳು ಎಲ್ಲಿಂದ ಬರುತ್ತಿವೆ. ಆ ದತ್ತಾಂಶಗಳನ್ನು ಯಾರು ನೀಡುತ್ತಿದ್ದಾರೆ. ಬಿಎಲ್‍ಎಗಳಲ್ಲದೆ, ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹೇಗೆ ಮುದ್ರಿತ ಅರ್ಜಿ ನಮೂನೆಗಳನ್ನು ಪಡೆಯುತ್ತಿದ್ದಾರೆ ಮತ್ತು ಸಲ್ಲಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.




