ಸರಕಾರದಲ್ಲಿ ನನ್ನ ಮಾತು ಎಷ್ಟು ನಡೆಯುತ್ತೆ?, ನಡೆಯಲ್ಲ ಅನ್ನುವುದು ನನಗೆ ಮಾತ್ರ ಗೊತ್ತು : ಮಾಜಿ ಸಿಎಂ ಸಿದ್ದರಾಮಯ್ಯ ಮಾರ್ಮಿಕ ನುಡಿ

ಬೆಂಗಳೂರು : ‘ನಾನೀಗ ಮುಖ್ಯಮಂತ್ರಿ ಅಲ್ಲ, ಈ ಸರಕಾರದಲ್ಲಿ ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನುವುದು ನನಗೆ ಮಾತ್ರ ಗೊತ್ತು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ನುಡಿದಿದ್ದಾರೆ.
ಗುರುವಾರ ನಗರದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಎಸ್‍ಸಿ, ಎಸ್‍ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ನಡೆದ ದತ್ತಿ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನೀಗ ರಾಜ್ಯದ ಮುಖ್ಯಮಂತ್ರಿ ಅಲ್ಲ. ಸರಕಾರದ ಮಟ್ಟದಲ್ಲಿ, ಆಡಳಿತ ವಲಯದಲ್ಲಿ ನನ್ನ ಮಾತು ಈಗಲೂ ನಡೆಯುತ್ತದೆ ಎಂದು ಬಹಳ ಜನರು ಅಂದುಕೊಂಡಿದ್ದಾರೆ. ನಾನೂ ಕೂಡ ಹಾಗೇ ಅಂದುಕೊಂಡಿದ್ದೇನೆ. ಆದರೆ, ಸರಕಾರದಲ್ಲಿ ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನುವುದು ನನಗೆ ಮಾತ್ರ ಗೊತ್ತಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಲಹೆ-ಸೂಚನೆಗಳಿಗೆ ಮನ್ನಣೆ ದೊರೆಯುತ್ತಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ಇದೇ ವೇಳೆಯಲ್ಲಿ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುವವರ ಜೊತೆಗೆ ಹೋಗಬಾರದು, ಮನುವಾದಿಗಳಿಂದ ಬದಲಾವಣೆ ಆಗುವುದಿಲ್ಲ. ಮನುವಾದಿಗಳ ಜೊತೆ ನೀವು ಹೋದರೆ ನಿಮಗೆ ಒಂದು ಸ್ಥಾನಮಾನ ಸಿಗಬಹುದು, ಆದರೆ, ಸಮಾಜದಲ್ಲಿ ಬದಲಾವಣೆ ಆಗುವುದಿಲ್ಲ ಎಂದರು.
ನರೇಂದ್ರ ಮೋದಿ ಪ್ರಧಾನಿಯಾಗಬೇಕಾದರೆ ಸಂವಿಧಾನವೇ ಕಾರಣ. ನಾನು ಮುಖ್ಯಮಂತ್ರಿ ಆಗಬೇಕಾದರೆ ಸಂವಿಧಾನವೇ ಕಾರಣ. ಬಿಜೆಪಿಗೆ ದಲಿತರೂ ಕೂಡ ಮತ ಹಾಕಿದ್ದಾರಲ್ಲವೇ, ಆದರೆ, ಅವರೇಕೆ ದಲಿತರ ಪರವಾದ ಕಾಯ್ದೆಗಳನ್ನು ತರಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಹಳ ಜನ ಹುಡುಗರು ಮೊದಲು ಎಲ್ಲೆಂದರಲ್ಲಿ ಮೋದಿ, ಮೋದಿ ಅನ್ನುತ್ತಿದ್ದರು, ಈಗ ಸೈಲೆಂಟ್ ಆಗಿದ್ದಾರೆ ಎಂದು ಕುಟುಕಿದರು.






