ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಪತ್ರಕರ್ತ ಪಿ.ರಾಮಯ್ಯ ನಿಧನ

ಬೆಂಗಳೂರು, ಫೆ.10: ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ.ರಾಮಯ್ಯ(93) ಅವರು ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ.ರಾಮಯ್ಯ ಅಂಗಾಂಗ ವೈಫಲ್ಯದಿಂದಾಗಿ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ.ಬಾಲಾಜಿ ತಿಳಿಸಿದ್ದಾರೆ .
1933ರ ಸೆ.12 ರಂದು ಜನಿಸಿದ ರಾಮಯ್ಯ ಅವರು, ಇಬ್ಬರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕಳನ್ನು ಅಗಲಿದ್ದಾರೆ .
'ದಿ ಹಿಂದೂ' ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದ ರಾಮಯ್ಯ ಅವರು, ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು .
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ , ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು, ಪತ್ರಿಕಾ ಅಕಾಡೆಮಿ ಹಾಗೂ ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು . ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು .
ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವ ಶರೀರವನ್ನು ನಾಳೆ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಅವರ ಮನೆಯಲ್ಲಿ ಇಡಲಾಗುವುದು ಎಂದು ಡಾ.ಬಾಲಾಜಿ ತಿಳಿಸಿದ್ದಾರೆ .






