ಮುಸ್ಲಿಮರ ಮತ ಡಿಲೀಟ್‌ಗೆ ಬಿಜೆಪಿ ಕಚೇರಿಯಿಂದಲೇ ಫಾರ್ಮ್!
ಬಿಜೆಪಿ ಕಾರ್ಯಕರ್ತರೇ ಒಪ್ಪಿಕೊಂಡ ಸತ್ಯವೇನು ?

ರಾಜ್ಯಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಮೂನೆ-7ರ ಷಡ್ಯಂತ್ರದ ಬಿಸಿ ಹೆಚ್ಚಾಗುತ್ತಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಜೆಪಿ ಕಾರ್ಯಾಲಯದಿಂದ ಈಗಾಗಲೇ ಹೆಸರು, ವಿಳಾಸ, ಎಪಿಕ್ ನಂಬರ್‌ಗಳು ಮುದ್ರಿತವಾಗಿರುವ ನಮೂನೆಗಳನ್ನು ಕಾರ್ಯಕರ್ತರು ಬಿಎಲ್‌ಒಗಳಿಗೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಕೊಡಗಿನ ಮಡಿಕೇರಿ ಕ್ಷೇತ್ರ-208ರ ಬೂತ್ ನಂಬರ್ 21ರ ಬ್ಯಾಡಗೊಟ್ಟ ಬೂತ್‌ನಲ್ಲಿ ಮುಸ್ಲಿಮ್ ಮತದಾರರನ್ನು ಗುರಿಯಾಗಿಸಿಕೊಂಡು ಬಿಜೆಪಿ ಕಾರ್ಯಕರ್ತರು ಸೆ.23 ರಂದು 63 ಮತದಾರರ ವಿರುದ್ಧ ನಮೂನೆ-7 ಅನ್ನು ಸಂಬಂಧಪಟ್ಟ ಬಿಎಲ್‌ಒಗೆ ನೀಡಿರುವ ಅರ್ಜಿಗಳು ʼವಾರ್ತಾಭಾರತಿʼಗೆ ಲಭ್ಯವಾಗಿವೆ.
ನಮೂನೆ-7ಅನ್ನು ಬಿಜೆಪಿ ಕಾರ್ಯಕರ್ತರಾದ ರಜಿನಿ ಯು.ಎಲ್. ಮತ್ತು ಯು.ಎಚ್.ಲೋಕೇಶ್ ಎಂಬವರು ಮುಸ್ಲಿಮ್ ಮತದಾರರ ವಿರುದ್ಧ ನೀಡಿರುವುದು ʼವಾರ್ತಾಭಾರತಿʼಗೆ ಖಚಿತವಾಗಿದೆ. ಈ ಬಗ್ಗೆ ವಾರ್ತಾಭಾರತಿ ವರದಿಗಾರರು ಮುದ್ರಿತವಾಗುತ್ತಿರುವ ನಮೂನೆಗಳು ಎಲ್ಲಿಂದ ಲಭ್ಯವಾಯಿತು ಎಂದು ಕೇಳಿದ ಪ್ರಶ್ನೆಗೆ, ಸೋಮವಾರಪೇಟೆ ಬಿಜೆಪಿ ಪಕ್ಷದ ಕಚೇರಿಯಿಂದ ಲಭ್ಯವಾಗಿದೆ ಎಂದು ಅರ್ಜಿದಾರರು ಮಾಹಿತಿ ನೀಡಿದ್ದಾರೆ.
► '50 ಮಂದಿಯ ವಿರುದ್ಧ ನಮೂನೆ-7 ಸಲ್ಲಿಸಿದ್ದೇವೆ' :
ಈ ಕುರಿತು ʼವಾರ್ತಾಭಾರತಿʼಯ ವರದಿಗಾರರು ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ, ಅರ್ಜಿದಾರರೊಬ್ಬರು ತಮ್ಮ ಬೂತ್‌ನಲ್ಲಿ ಸುಮಾರು 50 ಮಂದಿಯ ವಿರುದ್ಧ ನಮೂನೆ-7 ಸಲ್ಲಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ವರದಿಗಾರರು, "ನೀವು ಎಷ್ಟು ಜನರ ಮೇಲೆ ನಮೂನೆ-7 ಸಲ್ಲಿಸಿದ್ದೀರಿ?" ಎಂದು ಪ್ರಶ್ನಿಸಿದಾಗ, ಅರ್ಜಿದಾರರು 10 ಮಂದಿಯ ವಿರುದ್ಧ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಬಳಿಕ, ಬೂತ್‌ನಲ್ಲಿ ಒಟ್ಟು ಎಷ್ಟು ನಮೂನೆ-7 ಸಲ್ಲಿಕೆಯಾಗಿದೆ ಎಂದು ವರದಿಗಾರರು ಕೇಳಿದಾಗ "ಡೌಟ್ ಇದ್ದವರಲ್ಲಿ ಸುಮಾರು 50 ಜನರ ಮೇಲೆ ಅಪ್ಲೈ ಮಾಡಿದ್ದೇವೆ" ಎಂದು ಹೇಳಿದ್ದಾರೆ.
ಈ ಅರ್ಜಿಗಳಲ್ಲಿ ಕೆಲವರ ಮತಗಳು ಎರಡು ಕಡೆ ಇರುವ ಬಗ್ಗೆ ಅನುಮಾನವಿದ್ದ ಹಿನ್ನೆಲೆಯಲ್ಲಿ ಬಿಎಲ್‌ಒಗೆ ಅರ್ಜಿ ನೀಡಿರುವುದಾಗಿ ಅವರು ಹೇಳಿದ್ದಾರೆ.
► 'ಪಾರ್ಟಿಯಿಂದಲೇ ಹೆಸರು ಮುದ್ರಿತ ಫಾರಂ ನೀಡಲಾಗಿದೆ' :
ಸಂಭಾಷಣೆಯ ವೇಳೆ, ಹೆಸರು ಮತ್ತು ಇತರ ವಿವರಗಳು ಮೊದಲೇ ಮುದ್ರಿತವಾಗಿರುವ ಅರ್ಜಿ ನಮೂನೆಗಳು ಎಲ್ಲಿಂದ ಬಂದವು ಎಂದು ಪ್ರಶ್ನಿಸಿದಾಗ, "ನಮ್ಮ ಪಾರ್ಟಿಯಿಂದ ಕೊಟ್ಟಿದ್ದಾರೆ" ಎಂದು ಅರ್ಜಿದಾರರು ತಿಳಿಸಿದ್ದಾರೆ. ಈ ಕುರಿತು ಮತ್ತಷ್ಟು ಪ್ರಶ್ನಿಸಿದಾಗ, "ಸೋಮವಾರಪೇಟೆಯಿಂದ" ಎಂದು ಉತ್ತರಿಸಿದ್ದಾರೆ.






