ಬೆಂಗಳೂರು | ಮಹಿಳೆಯರೇ ಮುಂಚೂಣಿಯಲ್ಲಿರುವ ದೇವನಹಳ್ಳಿಯ ಫಾಕ್ಸ್ಕಾನ್ iPhone ಘಟಕದಲ್ಲಿ 30 ಸಾವಿರ ಉದ್ಯೋಗಿಗಳ ನೇಮಕಾತಿ

Photo Credit : X \ @IndianTechGuide
ಬೆಂಗಳೂರು: ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಸ್ಥಾಪಿತವಾಗಿರುವ ಮಹಿಳೆಯರೇ iPhone ಉತ್ಪಾದನಾ ಘಟಕದಲ್ಲಿ ಫಾಕ್ಸ್ ಕಾನ್ ವೇಗವಾಗಿ ನೇಮಕಾತಿ ನಡೆಸಿದ್ದು, ಕೇವಲ ಎಂಟು–ಒಂಭತ್ತು ತಿಂಗಳ ಅವಧಿಯಲ್ಲಿ ಸುಮಾರು 30 ಸಾವಿರ ಕಾರ್ಮಿಕರನ್ನು ನೇಮಿಸಿಕೊಂಡಿದೆ. ಇದು ದೇಶದ ಕೈಗಾರಿಕಾ ವಲಯದಲ್ಲಿ ಅಪರೂಪದ ವೇಗದ ನೇಮಕಾತಿ ಎಂದು ಉದ್ಯಮ ವಲಯ ಅಂದಾಜಿಸಲಾಗಿದೆ.
ಚೀನಾವನ್ನು ಮೀರಿ ಪೂರೈಕೆ ಸರಪಳಿಯನ್ನು ವಿಸ್ತರಿಸುವ ಆಪಲ್ ತಂತ್ರದ ಭಾಗವಾಗಿ ಈ ವಿಸ್ತರಣೆ ನಡೆಯುತ್ತಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. 300 ಎಕರೆ ಪ್ರದೇಶದಲ್ಲಿ ಹರಡಿರುವ ಈ ಘಟಕವು ಮಹಿಳಾ ಉದ್ಯೋಗಿಗಳಿಂದಲೇ ಹೆಚ್ಚು ಗಮನ ಸೆಳೆಯುತ್ತಿದೆ. ಇಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿ ಸುಮಾರು 80 ಶೇಕಡಾ ಮಹಿಳೆಯರಾಗಿದ್ದು, ಅವರಲ್ಲಿ ಹೆಚ್ಚಿನವರು 19ರಿಂದ 24 ವರ್ಷದೊಳಗಿನವರು ಮತ್ತು ಮೊದಲ ಬಾರಿಗೆ ಉದ್ಯೋಗ ಕ್ಷೇತ್ರ ಪ್ರವೇಶಿಸಿರುವವರು ಎಂದು ತಿಳಿದು ಬಂದಿದೆ.
ಈ ವರ್ಷ ಏಪ್ರಿಲ್–ಮೇ ತಿಂಗಳಲ್ಲಿ iPhone 16 ಮಾದರಿಯ ಪರೀಕ್ಷಾರ್ಥ ಉತ್ಪಾದನೆ ಆರಂಭಿಸಿದ ಘಟಕ, ಈಗ ಇತ್ತೀಚಿನ iPhone 17 ಪ್ರೊ ಮ್ಯಾಕ್ಸ್ ಮಾದರಿಗಳ ತಯಾರಿಕೆಗೆ ಕಾಲಿಟ್ಟಿದೆ. ಇಲ್ಲಿ ತಯಾರಾಗುವ iPhoneಗಳ 80 ಶೇಕಡಕ್ಕೂ ಹೆಚ್ಚು ವಿದೇಶಗಳಿಗೆ ರಫ್ತು ಆಗುತ್ತಿದೆ ಎಂದು ತಿಳಿದುಬಂದಿದೆ.
ಉತ್ಪಾದನಾ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಗರಿಷ್ಠ ಸಾಮರ್ಥ್ಯ ತಲುಪಿದ ಬಳಿಕ ಘಟಕದಲ್ಲಿ ಉದ್ಯೋಗಿಗಳ ಸಂಖ್ಯೆ 50 ಸಾವಿರದವರೆಗೆ ಏರಿಕೆಯಾಗುವ ನಿರೀಕ್ಷೆ ಇದೆ. ಮಹಿಳಾ ಸಿಬ್ಬಂದಿಗೆ ವಸತಿ ಕಲ್ಪಿಸಲು ಆರು ದೊಡ್ಡ ವಸತಿ ನಿಲಯಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಇನ್ನಷ್ಟು ನಿಲಯಗಳ ನಿರ್ಮಾಣವೂ ಸಾಗುತ್ತಿದೆ.
ಯೋಜಿತ ವಿಸ್ತರಣೆಯೊಂದಿಗೆ ದೇವನಹಳ್ಳಿ ಘಟಕವು ವಸತಿ, ವೈದ್ಯಕೀಯ ಸೇವೆ, ಶಾಲೆ ಹಾಗೂ ಮನರಂಜನಾ ಸೌಲಭ್ಯಗಳನ್ನು ಒಳಗೊಂಡ ‘ಮಿನಿ ಟೌನ್ಶಿಪ್’ ರೂಪ ಪಡೆಯುವ ಸಾಧ್ಯತೆ ಇದೆ. ಉಚಿತ ವಸತಿ ಮತ್ತು ಸಬ್ಸಿಡಿ ಆಹಾರದ ಜೊತೆಗೆ ಕಾರ್ಮಿಕರಿಗೆ ಸರಾಸರಿ ಮಾಸಿಕ 18,000 ರೂಪಾಯಿ ಸಂಬಳ ದೊರೆಯಲಿದೆ ಎನ್ನಲಾಗಿದೆ.
ಈ ಯೋಜನೆಗೆ ಫಾಕ್ಸ್ಕಾನ್ ಸುಮಾರು 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಪೂರ್ಣಗೊಂಡ ನಂತರ, ಉತ್ಪಾದನಾ ಸಾಮರ್ಥ್ಯ ಹಾಗೂ ಉದ್ಯೋಗದ ಪ್ರಮಾಣ ಎರಡೂ ಅಂಶಗಳಲ್ಲಿ ಇದು ದೇಶದ ಅತಿದೊಡ್ಡ ಕಾರ್ಖಾನಿಯಾಗಲಿದೆ ಎಂದು ಉದ್ಯಮ ವಲಯ ಅಂದಾಜಿಸಿದೆ. 2021ರಲ್ಲಿ ಜಾರಿಗೆ ಬಂದ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಯ ನೆರವಿನಿಂದ, ಭಾರತ iPhone ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಸೌಜನ್ಯ: timesofindia







