ಉದ್ಯಮಿಗೆ ವಂಚನೆ ಪ್ರಕರಣ: ಹಾಲಶ್ರೀ ಜಾಮೀನು ಆದೇಶವನ್ನು ಅ.16ಕ್ಕೆ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು, ಅ.11: ಉದ್ಯಮಿಗೆ ವಂಚನೆ ಪ್ರಕರಣದಲ್ಲಿ 3ನೆ ಆರೋಪಿಯಾಗಿರುವ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲಶ್ರೀ ಸ್ವಾಮೀಜಿ ಜಾಮೀನು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಆದೇಶವನ್ನು ಅ.16ಕ್ಕೆ ಪ್ರಕಟಿಸುವುದಾಗಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಹೇಳಿದೆ.
ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಹಾಲಶ್ರೀ ಸ್ವಾಮೀಜಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ 57ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಗೋವಿಂದಯ್ಯ ಅವರು ಬುಧವಾರ ಆದೇಶ ಕಾಯ್ದಿರಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಅವರಿಂದ 5 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಿ ಪೆÇಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣದ ಆರೋಪಿಗಳಾದ ಚೈತ್ರಾ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ಇತ್ತ ಪ್ರಕರಣದ ಆರೋಪಿ ಹಾಲಶ್ರೀ, ದೂರುದಾರರಿಂದ 1.50 ಕೋಟಿ ರೂ. ಹಣ ಪಡೆದ ಆರೋಪ ಎದುರಿಸುತ್ತಿರುವ ಸ್ವಾಮೀಜಿಯನ್ನು ಸೆ.19ರಂದು ಸಿಸಿಬಿ ಪೊಲೀಸರು ಒಡಿಶಾದ ಕಟಕ್‍ನಲ್ಲಿ ಬಂಧಿಸಿದ್ದರು. ಇದಕ್ಕೂ ಮುನ್ನ, ಹಾಲಶ್ರೀ ಸ್ವಾಮೀಜಿ ಅವರು ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನನ್ನು ಕೋರಿದ್ದರು.







