ವಿಧಾನಸೌಧದ ಆವರಣದಲ್ಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ‘ಫ್ರೀಡಂ ಹಬ್ಬ’

ಬೆಂಗಳೂರು : ಎಂಭತ್ತನೆ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಭವ್ಯ ವಿಧಾನಸೌಧ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸರಕಾರದ ವತಿಯಿಂದ ಶನಿವಾರ ನಡೆದ ಐತಿಹಾಸಿಕ ‘ಫ್ರೀಡಂ ಹಬ್ಬ’ವು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಸಂಸ್ಕೃ ತಿಯನ್ನೊಳಗೊಂಡು ದಿನಪೂರ್ತಿ ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರ ಸಡಗರ, ಸಂಭ್ರಮಾಚರಣೆಗೆ ಸಾಕ್ಷಿಯಾಯಿತು.
ವಿಧಾನಸೌಧದ ಮುಂಭಾಗ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಿಸಿತ್ತು. ಸದಾ ವಾಹನಗಳ ಅಬ್ಬರದಿಂದ ಕೂಡಿದ್ದ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ವೀದಿ ಸೇರಿದಂತೆ ಸುತ್ತಮುತ್ತಲಿನ ರಸ್ತೆಗಳು ಬಣ್ಣ-ಬಣ್ಣದ ಚಿತ್ತಾರಗಳಿಂದ ಕಂಗೊಳಿಸಿದ್ದವು. ರಸ್ತೆಯುದ್ದಕ್ಕೂ ಕಲೆಯ ರಸದೌತಣ, ರಸ್ತೆಯ ಅಂಚುಗಳಲ್ಲಿ ನಾನಾ ಜಿಲ್ಲೆಗಳ ತಿಂಡಿ-ತಿನಿಸುಗಳು ರಸಗವಳ. ಮಕ್ಕಳಾದಿಯಾಗಿ ವೈವಿಧ್ಯಮಯ ಜನರೂ ನೆರೆದಿದ್ದುದು ಅತ್ಯಂತ ವಿಶೇಷವಾಗಿತ್ತು.
ಬೆಂಗಳೂರಿನಲ್ಲಿ ನೆಲೆಸಿರುವ ಕರ್ನಾಟಕದ ನಾನಾ ಭಾಗಗಳ ಹಾಗೂ ನೆರೆ ರಾಜ್ಯಗಳ ಜನರು ದಿನವಿಡೀ ನಡೆದ ಸಂಭ್ರಮಾಚರಣೆಯಲ್ಲಿ ತಮ್ಮ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಸಾಂಪ್ರದಾಯಿಕ ಉಡುಪುಗಳ ಪ್ರದರ್ಶನದೊಂದಿಗೆ ಖುಷಿಪಟ್ಟರು. ವಿಧಾನಸೌಧ ಮತ್ತು ಅದಕ್ಕೆ ಸಂಪರ್ಕಿಸುವ ರಸ್ತೆಗಳು ಸಾರ್ವಜನಿಕರ ಪೆರೇಡ್, ಸಮುದಾಯಗಳ ಪ್ರದರ್ಶನ, ಸಂಗೀತ, ಪ್ರಾದೇಶಿಕ ಖಾದ್ಯಗಳು ಹಾಗೂ ಕರಕುಶಲ ವಸ್ತುಗಳನ್ನೊಳಗೊಂಡ ಸಾಂಸ್ಕತಿಕ ಕಾರಿಡಾರ್ ಆಗಿ ಬದಲಾಗಿತ್ತು.
ಫ್ರೀಡಂ ಹಬ್ಬಕ್ಕೆ ಬಂದಿದ್ದ ಮಕ್ಕಳು, ಪೋಷಕರು, ಯುವಕರು ವಿಧಾನಸೌಧದ ಒಳಗಿರುವ ಭವ್ಯ ಶಾಸನಸಭೆ ಸಭಾಂಗಣವನ್ನು ಪ್ರವೇಶಿಸಿ ಗೈಡ್‍ಗಳ ಮೂಲಕ ಶಾಸಕಾಂಗ, ಕಾರ್ಯಾಂಗದ ಚಟುವಟಿಕೆಗಳನ್ನು ತಿಳಿದುಕೊಳ್ಳುತ್ತಾ, ಇಡೀ ಬದುಕಿನಲ್ಲಿ ತಮ್ಮ ನೆನಪಿನಲ್ಲಿ ಉಳಿಯುವಂತಹ ದಿನವನ್ನು ಕಳೆದು ಸಂಭ್ರಮಪಟ್ಟರು. `ಫ್ರೀಡಂ ಹಬ್ಬ'ವು ‘ನಮ್ಮೂರು, ನಿಮ್ಮೂರು: ಎಲ್ಲರ ಬೆಂಗಳೂರು’ ಎಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿತು. ಫ್ರೀಡಂ ಹಬ್ಬವು ಬೃಹತ್ ಸಾಂಸ್ಕೃತಿಕ ಸಂಭ್ರಮಾಚರಣೆಯ ಮೂಲಕ ಬೆಂಗಳೂರಿನ ‘ವಿವಿಧತೆಯಲ್ಲಿ ಏಕತೆ'ಯನ್ನು ಪ್ರದರ್ಶಿಸಿತು. ಬೆಳಗ್ಗೆಯಿಂದಲೇ ಜನರು ಫ್ರೀಡಂ ಹಬ್ಬಕ್ಕೆ ಬರಲಾರಂಭಿಸಿದರೂ ಕೂಡ ಮಧ್ಯಾಹ್ನದ ನಂತರ ಜನ ತಂಡೋಪತಂಡವಾಗಿ ಆಗಮಿಸಿದರು. ಸಂಜೆ ವಿಧಾನಸೌಧವನ್ನು ವಿದ್ಯುದ್ದೀಪಗಳಿಂದ ಅಲಂಕಾರಿಸಲಾಗಿತ್ತು. ವಿಧಾನಸೌಧದ ಲೈಟಿಂಗ್ ಸೊಬಗನ್ನು ಕಣ್ತುಂಬಿಕೊಂಡರು.
‘ಫ್ರೀಡಂ ಪರೇಡ್’ನಲ್ಲಿ ಹೆಜ್ಜೆ ಹಾಕಿದ ಡಿ.ಕೆ.ಶಿವಕುಮಾರ್: ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಫ್ರೀಡಂ ಪೆರೇಡ್ (ಸ್ವಾತಂತ್ರ್ಯ ನಡಿಗೆ) ನಡೆಸಲಾಯಿತು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಪರೇಡ್‍ನಲ್ಲಿ ಹೆಜ್ಜೆ ಹಾಕುತ್ತಾ ಸಾಗಿದರು.
ಈ ವೇಳೆ, ಭಾರತದ ವೈವಿಧ್ಯಮಯ ಸಂಸ್ಕೃತಿಗಳು, ಕರ್ನಾಟಕದ ಪ್ರದೇಶಗಳು ಮತ್ತು ವೃತ್ತಿಪರರನ್ನು ಪ್ರತಿನಿಧಿಸುವ ಸುಮಾರು 40ಕ್ಕೂ ಹೆಚ್ಚು ಜಾನಪದ ಪ್ರದರ್ಶನಗಳು, ಸಂಗೀತ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನೊಳಗೊಂಡ ವರ್ಣರಂಜಿತ ಸ್ವಾತಂತ್ರ್ಯ ದಿನದ ಪೆರೇಡ್ ನಡೆಸಿದವು. ಈ ಪೆರೇಡ್‍ನಲ್ಲಿ ಜಾನಪದ ಕಲಾ ತಂಡಗಳು ಹಾಗೂ ನಾನಾ ವೇಷಭೂಷಣ ತೊಟ್ಟ ಪ್ರತಿಭೆಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಗಾಂಧಿ ವೇಷಧಾರಿ ವಿಧಾನಸೌಧದ ಸುತ್ತಲೂ ಸಂಚರಿಸುತ್ತಿದ್ದರು. ಅವರನ್ನು ಕಂಡವರು ಕೂಡಲೇ ಅವರೊಂದಿಗೆ ನಿಂತು ಫೊಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಮಲ್ಲಕಂಬ, ವೀರಗಾಸೆ, ಹುಲಿವೇಷ, ಯಕ್ಷಗಾನ, ಭರತನಾಟ್ಯ ಹೀಗೆ ನಾನಾ ಬಗೆಯ ಕಲೆ ಮತ್ತು ಪ್ರದರ್ಶನಗಳು ನೋಡುಗರ ಗಮನ ಸೆಳೆದವು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಸ್ತೆಯುದ್ದಕ್ಕೂ ಜನ ನಿಂತು ನೋಡುತ್ತಿದ್ದರು. ಆಗಾಗ ರಸ್ತೆಯಲ್ಲೂ ಪ್ರದರ್ಶನಗಳು ನಡೆಯುತ್ತಿದ್ದವು.
ಮಕ್ಕಳ ಕಲರವ: ಮಕ್ಕಳಿಗೆ ಸ್ವಾತಂತ್ರ್ಯದ ಕುರಿತ ಕಲಿಕೆಗಾಗಿ ಪ್ರತ್ಯೇಕ ವಲಯವನ್ನು ನಿರ್ಮಿಸಲಾಗಿತ್ತು. ಇಲ್ಲಿ ಸಂವಾದಾತ್ಮಕ ಆಟಗಳು, ಕಥೆ ಹೇಳುವುದು, ಕಲೆ, ಕರಕುಶಲ ವಸ್ತುಗಳು, ಸೃಜನಶೀಲ ಕಾರ್ಯಾಗಾರಗಳು ಮತ್ತು ಕುಟುಂಬ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರನ್ನು ಜೀವಂತಗೊಳಿಸುವುದು, ರಸಪ್ರಶ್ನೆಗಳು, ಸಂವಾದಾತ್ಮಕ ಕಲಿಕೆ ಮತ್ತು ತಕ್ಷ ಣದ ಬಹುಮಾನಗಳ ಮೂಲಕ ಮಕ್ಕಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಾಗಿತ್ತು.
ಕಳೆಗಟ್ಟಿದ್ದ ಮಳಿಗೆಗಳು: 120ಕ್ಕೂ ಹೆಚ್ಚು ಮಳಿಗೆಗಳು ವಿಧಾನಸೌಧದ ಸುತ್ತಮುತ್ತ ಹಬ್ಬಕ್ಕೆ ಕಳೆಗಟ್ಟಿದ್ದವು. ಕರಕುಶಲ ವಸ್ತುಗಳು, ಜೈವಿಕ ಉಡುಪುಗಳು, ಆಟಿಕೆಗಳು, ಜವಳಿ ಮತ್ತು ಆಹಾರ ಮಳಿಗೆಗಳು ದಿನವಿಡೀ ಉತ್ಸಾಹಭರಿತ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದವು. ಹೀಗಾಗಿ ಮಳಿಗೆಗಳು ಹಬ್ಬಕ್ಕೆ ಕಳೆಗಟ್ಟಿದ್ದವು. ಕಲಾಕೃತಿಗಳು, ಪ್ರದರ್ಶನಗಳು, ಅಭಿನಯ ಮತ್ತು ಸ್ಮರಣಾರ್ಥ ಅಂಚೆ ಕಾರ್ಡ್‍ಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ಮೈಲಿಗಲ್ಲುಗಳನ್ನು ಮರುಸೃಷ್ಟಿಸುವ ವಾಕ್-ಥ್ರೂ ಮ್ಯೂಸಿಯಂ ಗಮನ ಸೆಳೆಯಿತು. ವರ್ಣಚಿತ್ರ ಮತ್ತು ಜಂಟಿ ಕಲಾಕೃತಿಗಳನ್ನು ಬಿಂಬಿಸುವ ಫ್ರೀಡಂ ವಾಲ್ ಕೂಡ ವಿಶೇಷವಾಗಿತ್ತು.
ಸಂಜೆ ಪ್ರಸಿದ್ಧ ಗಾಯಕರಿಂದ ನಡೆದ ಸಂಗೀತ ಕಾರ್ಯಕ್ರಮವು ವಿಶೇಷವಾಗಿತ್ತು. ಜನ ರಸ್ತೆಯಲ್ಲೇ ಕೂತು ಸಂಗೀತ ಆಲಿಸಿ ಸಂಭ್ರಮಿಸಿದರು. ಕೊನೆಯಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಬಾಣ ಬಿರುಸುಗಳು ಹಾಗೂ ಪಟಾಕಿ ಪ್ರದರ್ಶನದೊಂದಿಗೆ ಫ್ರೀಡಂ ಹಬ್ಬವು ಸಮಾಪ್ತಿಯಾಯಿತು.






