ಕುಡುಪು ಗುಂಪು ಹತ್ಯೆ ಪ್ರಕರಣ | ‘ಪಾಕಿಸ್ತಾನ್ ಝಿಂದಾಬಾದ್’ ಕೂಗಿಗೆ ಕೊಲೆ ಎಂದು ನಾನು ಹೇಳಿಲ್ಲ: ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಂಗಳೂರು: ‘ಪಾಕಿಸ್ತಾನ್ ಝಿಂದಾಬಾದ್ ಎಂದು ಘೋಷಣೆ ಕೂಗಿದಕ್ಕೆ ಕೊಲೆ ಮಾಡಲಾಗಿದೆ ಎಂದು ನಾನು ಹೇಳಿಲ್ಲ. ಬದಲಾಗಿ ಆರೋಪಿಗಳು ನೀಡಿರುವ ಹೇಳಿಕೆ ಇದಾಗಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಣೆ ನೀಡಿದ್ದಾರೆ.
ಮಂಗಳೂರಿನ ಹೊರವಲಯದ ಕುಡುಪು ಸಮೀಪ ವಲಸೆ ಕಾರ್ಮಿನನನ್ನು ದುಷ್ಕರ್ಮಿಗಳ ಗುಂಪೊಂದು ಮಾರಣಾಂತರ ಹಲ್ಲೆ ನಡೆಸಿ ಹತ್ಯೆಗೈದಿರುವ ಪ್ರಕರಣ ಸಂಬಂಧ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಮಾಧ್ಯಮಗಳಲ್ಲಿ ನನ್ನ ಹೇಳಿಕೆಗಳನ್ನು ತಪ್ಪಾಗಿ ತಿರುಚಿ ಸುದ್ದಿ ಹರಿಬಿಟ್ಟಿದ್ದಾರೆ ಎಂದರು.
ಪ್ರಕರಣ ಸಂಬಂಧ ಆರೋಪಿಗಳು ಪಾಕಿಸ್ತಾನ್ ಝಿಂದಾಬಾದ್ ಕೂಗಿದಕ್ಕೆ ಕೊಲೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನೆ ನಾನು ಕೆಲ ಮಾಧ್ಯಮಗಳಿಗೆ ತಿಳಿಸಿದ್ದೇನೆ. ಆದರೆ, ಇದು ನನ್ನ ಹೇಳಿಕೆಯಂತೆ ಬಿಂಬಿಸಿರುವುದು ಸರಿಯಲ್ಲ. ಈ ಪ್ರಕರಣವೂ ಗಂಭೀರವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ 20 ಮಂದಿಯನ್ನು ಬಂಧಿಸಿದ್ದಾರೆ. ತನಿಖೆ ಸಹ ಮುಂದುವರೆದಿದ್ದು, ಶೀಘ್ರದಲ್ಲಿಯೇ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಹತ್ಯೆಗೆ ಮೂಲ ಕಾರಣವನ್ನು ಬಹಿರಂಗಪಡಿಸಲಾಗುವುದು. ಹತ್ಯೆ ಆರೋಪಿಗಳನ್ನು ಬಚಾವ್ ಮಾಡುವ ಯಾವುದೇ ಪ್ರಯತ್ನ ನಡೆದಿಲ್ಲ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಈ ಬಗ್ಗೆ ಯಾರ ಬಗ್ಗೆಯೂ ಅನುಮಾನ ಬೇಡ ಎಂದು ಅವರು ಹೇಳಿದರು.







