ಪ್ರಜ್ವಲ್ ರೇವಣ್ಣ ಪ್ರಕರಣ | ಎಸ್ಐಟಿ ತಂಡಕ್ಕೆ ಮುಖ್ಯಮಂತ್ರಿ ಪದಕ ನೀಡುತ್ತೇವೆ: ಜಿ.ಪರಮೇಶ್ವರ್

ಜಿ.ಪರಮೇಶ್ವರ್
ಬೆಂಗಳೂರು : ಜೆಡಿಎಸ್ ಪಕ್ಷದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮುಖ್ಯಮಂತ್ರಿ ಪದಕ ಪ್ರದಾನಿಸುತ್ತೇವೆ. ಜತೆಗೆ, ರಾಷ್ಟ್ರಪತಿ ಪದಕಕ್ಕೂ ಶಿಫಾರಸ್ಸು ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದಲ್ಲಿ ನಮ್ಮ ಪೊಲೀಸರು ಅಚ್ಚುಕಟ್ಟಾಗಿ ಮೊದಲಿಂದಲೂ ತನಿಖೆ ಮಾಡಿದ್ದಾರೆ. ಹೀಗಾಗಿ, ಮೊದಲು ಎಸ್ಐಟಿಗೆ ಅಭಿನಂದನೆ ಹೇಳುತ್ತೇನೆ. ಶೀಘ್ರವಾಗಿ ತನಿಖೆ ಮುಗಿಸಿರುವ ಹಿನ್ನೆಲೆ ತನಿಖಾ ತಂಡದವರಿಗೆ ಮುಖ್ಯಮಂತ್ರಿ ಪದಕ ಪ್ರದಾನಿಸುವುದು ಮಾತ್ರವಲ್ಲದೆ, ರಾಷ್ಟ್ರಪತಿ ಪದಕಕ್ಕೂ ಶಿಫಾರಸ್ಸು ಮಾಡುತ್ತೇವೆ ಎಂದರು.
ಮಾದಿಗ ಸಮುದಾಯಗಳ ಒಕ್ಕೂಟದಿಂದ ಪ್ರತಿಭಟನೆಗೆ ಕರೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೂ ಭರವಸೆ ನೀಡಲಾಗಿತ್ತು. ಹಾಗಾಗಿ, ರಾಜ್ಯ ಸರಕಾರ ಎಸ್ಸಿ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದೆ. ಒಳ ಮೀಸಲಾತಿ ಏಕಾಏಕಿ ಜಾರಿ ಮಾಡಿದರೆ ಕಾನೂನು ಪ್ರಕಾರ ನಿಲ್ಲಲ್ಲ. ಹೀಗಾಗಿ ನಾವು ಕಾನೂನು ಚೌಕಟ್ಟಿನಲ್ಲಿ ನ್ಯಾ.ನಾಗಮೋಹನದಾಸ್ ಆಯೋಗ ರಚಿಸಿದ್ದು, ಯಾರಿಗೂ ಅನ್ಯಾಯ ಆಗದಂತೆ ಶೀಘ್ರದಲ್ಲಿಯೇ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಮಾತನಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಹಂತದಲ್ಲಿ ನಿಗಮ ಮಂಡಳಿಗಳ ನೇಮಕ ಕುರಿತು ಚರ್ಚೆ ಆಗಲಿದೆ ಎಂದ ಅವರು, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆಂದು ಬಿಜೆಪಿಯವರು ಇದರ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಆದರೆ, ನಾವು ಚುನಾವಣೆ ಅಕ್ರಮ ಬಗ್ಗೆ ಅಂಕಿ ಅಂಶಗಳನ್ನಿಟ್ಟು ಆರೋಪ ಮಾಡುತ್ತಿದ್ದು, ಎಲ್ಲವೂ ಶೀಘ್ರದಲ್ಲಿಯೇ ಬಹಿರಂಗ ಆಗಲಿದೆ ಎಂದು ಹೇಳಿದರು.







