ಆರೆಸ್ಸೆಸ್ ವಿಚಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಾಣಿಕೆ ಆಗಲ್ಲ: ಜಿ.ಪರಮೇಶ್ವರ್

ಬೆಂಗಳೂರು : ಆರೆಸ್ಸೆಸ್ ಸಂಸ್ಥೆಗೆ ನೂರು ವರ್ಷಗಳು ತುಂಬಿವೆ. ಆದರೆ, ಇದರ ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಹೊಸದೇನಲ್ಲ, ನೂರು ವರ್ಷವಾಗಿದೆ. ಆದರೆ, ಆರೆಸ್ಸೆಸ್ ವಿಚಾರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಂದಾಣಿಕೆ ಆಗುವುದಿಲ್ಲ. ಅದರ ಬಗ್ಗೆ ಆಗಿಂದಾಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಬಿಜೆಪಿ ಅಂಗ ಸಂಸ್ಥೆ ಎಂದು ಹೇಳುವ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಿ ರಾಜ್ಯದಲ್ಲಿ 2013ರಲ್ಲಿಯೇ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಆದೇಶ ಮಾಡಿದ್ದರು. ಆದರೆ, ಈಗ ನಾವು ಆದೇಶ ಮಾಡಿದರೆ ಮಾತ್ರ ಪ್ರಶ್ನೆ ಮಾಡುತ್ತಾರೆ. ಅವರು ಮಾಡಿದರೆ ಗೊಂದಲ ಆಯಿತು ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಯಚೂರಿನ ಪಿಡಿಒವೊಬ್ಬರನ್ನು ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರಕಾರಿ ನೌಕರರು ಸಂಘಟನೆಗಳಲ್ಲಿ ಭಾಗವಹಿಸುವಂತಿಲ್ಲ. ಸಂಘಟನೆಗಳ ಸದಸ್ಯತ್ವ ಪಡೆಯುವಂತಿಲ್ಲ. ಸದಸ್ಯರಾಗಲು ನೌಕರರಿಗೆ ಅವಕಾಶ ಇಲ್ಲ. ಅದಕ್ಕಾಗಿಯೇ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.





