ರಾಜ್ಯದ ಕಾರಾಗೃಹಗಳ ಪರಿಶೀಲನೆಗೆ ಉನ್ನತ ಸಮಿತಿ ರಚನೆ; ತಿಂಗಳೊಳಗೆ ಸಮಗ್ರ ವರದಿ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹವು ಸೇರಿದಂತೆ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿನ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ ಸಮಗ್ರ ವರದಿ ನೀಡುವಂತೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಅವರ ನೇತೃತ್ವದಲ್ಲಿ ಉನ್ನತ (ಹೈ-ಪವರ್) ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ನಗರದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪ್ರಧಾನ ಕಚೇರಿಯಲ್ಲಿ ‘ರಾಜ್ಯದ ಕಾರಾಗೃಹಗಳಲ್ಲಿ ಆಡಳಿತ ಮತ್ತು ಭದ್ರತೆಯ’ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಪಿಎಸ್ ಅಧಿಕಾರಿಗಳಾದ ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ಸಿ.ಬಿ.ರಿಷ್ಯಂತ್ ಹಾಗೂ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಗಳು ಸಮಿತಿಯ ಸಹ ಸದಸ್ಯರಾಗಿರುತ್ತಾರೆ ಎಂದರು.
ಈ ಹೈ-ಪವರ್ ಸಮಿತಿಯು ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಪರಿಶೀಲನೆ ನಡೆಸಿ ಒಂದು ತಿಂಗಳೊಳಗೆ ಸಮಗ್ರವಾದ ವರದಿಯನ್ನು ನೀಡಬೇಕು. ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳಂಥ ಘಟನೆಗಳಾಗುವುದು ಒಂದು ಭಾಗವಾದರೆ, ಸಿಸಿಟಿವಿ ಕೆಲಸ ಮಾಡದಿರುವುದು ಸೇರಿದಂತೆ ಎಲ್ಲ ರೀತಿಯ ಲೋಪಗಳ ಬಗ್ಗೆ ವರದಿಯಲ್ಲಿ ಕೊಡುವಂತೆ ಸಮಿತಿಗೆ ತಿಳಿಸಲಾಗುವುದು ಎಂದು ಜಿ.ಪರಮೇಶ್ವರ್ ಹೇಳಿದರು.
ಹೈ-ಪವರ್ ಸಮಿತಿಯ ವರದಿ ಬಂದ ಬಳಿಕ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾ ಅಥವಾ ಅಮಾನತುಗೊಳಿಸಲಾಗುವುದು ಎಂದು ಜಿ.ಪರಮೇಶ್ವರ್ ತಿಳಿಸಿದರು.
ಇದೇ ಮೊದಲ ಬಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಿರ್ವಹಣೆಗೆ ಐಪಿಎಸ್ ಹಂತದ ಅಧಿಕಾರಿಯೊಬ್ಬರನ್ನು ನೇಮಕಗೊಳಿಸಲಾಗುವುದು. ಇನ್ನು ಮುಂದೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಮುಖ್ಯ ಅಧೀಕ್ಷಕರ ಹುದ್ದೆಯ ಅಧಿಕಾರವನ್ನು ಐಪಿಎಸ್ ಅಧಿಕಾರಿಗೆ ವಹಿಸಲಾಗುವುದು ಎಂದು ಜಿ.ಪರಮೇಶ್ವರ್ ತಿಳಿಸಿದರು.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 5,000 ಕೈದಿಗಳಿದ್ದು, ಅವರಲ್ಲಿ ಬೇರೆ ಬೇರೆ ಬ್ಯಾರಕ್‍ಗಳಲ್ಲಿ ವಿಚಾರಣಾಧೀನ ಕೈದಿ ಹಾಗೂ ಸಜಾ ಕೈದಿಗಳಿದ್ದಾರೆ. ಕಾರಾಗೃಹದಲ್ಲಿರುವ ಜನಪ್ರಿಯತೆ ಹೊಂದಿದ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತದೆ. ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದಿರುವ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು ಹೈ-ಪವರ್ ಸಮಿತಿ ರಚನೆ ಮಾಡಿದ್ದೇವೆ ಎಂದು ಜಿ.ಪರಮೇಶ್ವರ್ ಹೇಳಿದರು.
ರಾಜ್ಯದಲ್ಲಿನ ಕಾರಾಗೃಹಗಳ ಈವರೆಗಿನ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಪರಿಶೀಲನೆ ಮಾಡಿದ್ದೇನೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಿಡುಗಡೆಯಾದ ಕೆಲವು ವೀಡಿಯೋಗಳು 2023ರಲ್ಲಿ ಆಗಿರುವಂಥದ್ದು. ನಿನ್ನೆ, ಮೊನ್ನೆ ಆಗಿರುವ ವೀಡಿಯೋಗಳಲ್ಲ. ಒಂದೆರಡು ವೀಡಿಯೋಗಳು ಮಾತ್ರ ಹಿಂದಿನ ಮೂರ್ನಾಲ್ಕು ತಿಂಗಳ ಹಿಂದೆ ನಡೆದಿರುವುದು. 2023ರಲ್ಲಿ ಯಾರು ಇದ್ದರು, 2024ರಲ್ಲಿ ಯಾರು ಇದ್ದರು, ಈಗ ಯಾರು ಇದ್ದಾರೆ ಅವರಿಂದ ಚರ್ಚೆ ಮಾಡಿ, ಉತ್ತರ ಪಡೆದುಕೊಂಡಿದ್ದೇವೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ರಾಜ್ಯದ ಎಲ್ಲ ಕಾರಾಗೃಹಗಳ ಅಧೀಕ್ಷಕರು ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಮತ್ತಷ್ಟು ಕಠಿಣ ಕ್ರಮ ಜರುಗಿಸಲಾಗುವುದು. ಹಳೆಯ ಘಟನೆಯಾಗಿರಲಿ ಅಥವಾ ಹೊಸದಾಗಿರಲಿ ಯಾವುದೇ ಕಾರಾಗೃಹಗಳಲ್ಲಿ ಕೈದಿಗಳು ಮೊಬೈಲ್ ಫೋನ್ ಬಳಕೆ ಕಂಡುಬಂದರೆ ಆ ಅವಧಿಯಲ್ಲಿ ಕಾರಾಗೃಹದ ಅಧೀಕ್ಷಕರನ್ನೇ ಹೊಣೆಯಾಗಿಸಲಾಗುವುದು ಎಂದು ಜಿ.ಪರಮೇಶ್ವರ್ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿದರು.
ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಂಗಳಿಗೆ ಒಮ್ಮೆಯಾದರೂ ಕಾರಾಗೃಹಗಳಿಗೆ ಭೇಟಿ ನೀಡಿ, ಪ್ರಧಾನ ಕಚೇರಿಗೆ ವರದಿ ನೀಡಬೇಕು. ಯಾವುದೇ ರೀತಿಯ ತಪ್ಪುಗಳಾದಾಗ ಕ್ರಮ ತೆಗೆದುಕೊಳ್ಳಲು ಸರಕಾರ ಸಿದ್ಧವಾಗಿದೆ. ಹೈ-ಪವರ್ ಸಮಿತಿ ವರದಿ ಬಂದ ನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್‍ಚಂದ್ರ, ಬೆಂಗಳೂರು ನಗರ ಪೊಲೀಸ್ ಅಯುಕ್ತ ಸೀಮಾಂತ್ ಕುಮಾರ್ ಸಿಂಗ್, ಐಎಸ್‍ಡಿ ವಿಭಾಗದ ಎಡಿಜಿಪಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಸಿಸಿಟಿವಿ ದೃಶ್ಯಗಳ ನಿಗಾವಣೆಗೆ ಕಮ್ಯಾಂಡ್ ಸೆಂಟರ್: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿರುವ ಸಿಸಿಟಿವಿಗಳ ಮೇಲೆ ಹಿರಿಯ ಅಧಿಕಾರಿಗಳು ನಿಗಾವಹಿಸಲು ಕಮಾಂಡ್ ಸೆಂಟರ್ ಸ್ಥಾಪಿಸಲಾಗುವುದು. ಈಗಾಗಲೇ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು, 15 ದಿನಗಳೊಳಗೆ ತಾಂತ್ರಿಕವಾಗಿ ಪರಿಶೋಧನೆ ನಡೆಸಿ ಆ ಎಲ್ಲಾ ಸಿಸಿಟಿವಿ ದೃಶ್ಯಗಳು ಕಾರಾಗೃಹ ಇಲಾಖೆಯಲ್ಲಿ ವೀಕ್ಷಿಸಲು ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿ.ಪರಮೇಶ್ವರ್ ತಿಳಿಸಿದರು.
ನೇಮಕಾತಿಗೆ ಅನುಮತಿ: ಒಂದೇ ಕಡೆ ಐದು ವರ್ಷ ಕಾರ್ಯನಿರ್ವಹಿಸಿದ ಕಾರಾಗೃಹ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಲಾಗುವುದು. ಕಾರಾಗೃಹಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬ ಸಬೂಬು ಹೇಳುತ್ತಿದ್ದಾರೆ. 197 ಮೇಲ್ವಿಚಾರಕರು, 22 ಬೋಧಕರು, 3 ಸಹಾಯಕ ಅಧೀಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ. 983 ಮೇಲ್ವಿಚಾರಕರು, 17 ಜೈಲರ್‍ಗಳ ನೇಮಕಾತಿಗೆ ಪ್ರಸ್ತಾವ ಬಂದಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದರು.







