ಕೊಲೆ ಪ್ರಕರಣಗಳ ಇಳಿಕೆ, ಪ್ರಸಕ್ತ ವರ್ಷ 1,142 ವರದಿ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ಪ್ರಸಕ್ತ ವರ್ಷ ನವೆಂಬರ್ ತಿಂಗಳವರೆಗೆ 1,142 ಕೊಲೆ ಪ್ರಕರಣಗಳು ವರದಿಯಾಗಿವೆ. ಕೌಟುಂಬಿಕ ಕಲಹ, ಆಸ್ತಿ ವಿಚಾರಕ್ಕೆ ಹೆಚ್ಚಿನಂಶ ಕೊಲೆಗಳಾಗುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ‘ಪ್ರಗತಿಯ ಸ್ತಂಭಗಳು’ ಪುಸ್ತಕವನ್ನು ಬಿಡುಗಡೆಗೊಳಿಸಿ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ವಿಪಕ್ಷದವರು ಬಿಂಬಿಸುತ್ತಿದ್ದಾರೆ. ಕೊಲೆ ಪ್ರಕರಣಗಳು ಹೆಚ್ಚಾಗಿಲ್ಲ ಎಂದರು.
2021ರಲ್ಲಿ 1340 ಪ್ರಕರಣಗಳು, 2022ರಲ್ಲಿ 1364, 2023ರಲ್ಲಿ 1389, 2024ರಲ್ಲಿ 1202 ಪ್ರಕರಣಗಳು ಹಾಗೂ ಪ್ರಸಕ್ತ ವರ್ಷ ನವೆಂಬರ್ ತಿಂಗಳವರೆಗೆ 1142 ಕೊಲೆ ಪ್ರಕರಣಗಳು ವರದಿಯಾಗಿವೆ ಎಂದು ಜಿ.ಪರಮೇಶ್ವರ್ ವಿವರಿಸಿದರು.
ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು, ಇಡೀ ದೇಶದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂಗೆ ಡಿಜಿಪಿಯನ್ನು ನೇಮಿಸಲಾಗಿದೆ. ಜಿಲ್ಲೆಗೊಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದ ಬಳಿಕ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
2022ರಲ್ಲಿ 12,550 ಸೈಬರ್ ಪ್ರಕರಣಗಳು ದಾಖಲಾಗಿದ್ದವು. ಸೈಬರ್ ಕ್ರೈಂಗೆ ಪ್ರತ್ಯೇಕ ಪೊಲೀಸ್ ಠಾಣೆಗಳು ಸ್ಥಾಪನೆಯಾದ ಬಳಿಕ 2023ರಲ್ಲಿ 21,903 ಪ್ರಕರಣಗಳು, 2024ರಲ್ಲಿ 21,995 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 13,000 ಪ್ರಕರಣಗಳು ವರದಿಯಾಗಿವೆ. ರಾಜ್ಯ ಸರಕಾರ ಕೈಗೊಂಡಿರುವ ದಿಟ್ಟ ಕ್ರಮಗಳಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2025ರಲ್ಲಿ ಸೈಬರ್ ಪ್ರಕರಣಗಳು ಕರ್ನಾಟಕದಲ್ಲಿ ಗಣನೀಯವಾಗಿ ಇಳಿಕೆ ಕಂಡಿವೆ ಎಂದು ಜಿ.ಪರಮೇಶ್ವರ್ ಹೇಳಿದರು.
ಅಮೆರಿಕಾದಲ್ಲಿದ್ದವರಿಗೆ ಬೆಂಗಳೂರಿನಿಂದ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. 1930 ಸಹಾಯವಾಣಿ ತೆರೆಯಲಾಗಿದ್ದು ಸೈಬರ್ ಕ್ರೈಂ ದೂರುಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲಾಗುತ್ತಿದೆ. ಸೈಬರ್ ಕ್ರೈಂ ಸಹಾಯವಾಣಿಯಲ್ಲಿ 66 ಜನ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸೈಬರ್ ಕ್ರೈಂ ನಿಯಂತ್ರಣಕ್ಕೆ ಇಲಾಖೆಯಲ್ಲಿ ಬಲವರ್ಧನೆಗೊಳಿಸಲಾಗಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಇಲಾಖೆಯ ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ಗೃಹ ಯೋಜನೆಯಡಿ 10,034 ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಶೇ.33ರಷ್ಟು ಸಿಬ್ಬಂದಿಗಳಿಗೆ ಪೊಲೀಸ್ ವಸತಿ ಲಭ್ಯವಾಗಿದೆ. ಶೇ.60ರಿಂದ 80ರಷ್ಟು ಸಿಬ್ಬಂದಿಗಳಿಗೆ ವಸತಿ ಕಲ್ಪಿಸುವ ಗುರಿ ಹೊಂದಲಾಗಿದ್ದು, ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಜಿ.ಪರಮೇಶ್ವರ್ ತಿಳಿಸಿದರು.
ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸ್ ಅಂದ ತಕ್ಷಣ ಭಯದ ವಾತವಾರಣ ಇದೆ. ಇದನ್ನು ನಿವಾರಿಸಲು ಮನೆಮನೆಗೆ ಪೊಲೀಸ್ ಸಹಕಾರಿಯಾಗುತ್ತಿದೆ. ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಶೇ.95ರಷ್ಟು ಪೂರ್ಣಗೊಂಡಿದೆ. ಪೊಲೀಸ ಸುರಕ್ಷತೆ ಮತ್ತು ಪಾರದರ್ಶಕತೆಯ ನಿಟ್ಟಿನಲ್ಲಿ ಬಾಡಿವೋರ್ನ್ ಕ್ಯಾಮೆರಾಗಳನ್ನು ಒದಗಿಸಲಾಗಿದೆ ಎಂದು ಜಿ.ಪರಮೇಶ್ವರ್ ಹೇಳಿದರು.
9 ಸಾವಿರ ಎಐ ಕ್ಯಾಮೆರಾ:
ಬೆಂಗಳೂರು ನಗರದಲ್ಲಿ 160 ಪ್ರಮುಖ ಜಂಕ್ಷನ್‍ಗಳಲ್ಲಿ 9 ಸಾವಿರ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿಯ ಘಟನೆ ನಡೆದರೆ ಕಂಟ್ರೋಲ್ ರೂಮ್‍ಗೆ ಲೈವ್‍ಫೀಡ್ ಸಿಗುತ್ತಿದೆ. ಇತರೆ 7 ಲಕ್ಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಆಧುನೀಕರಗೊಳಿಸಲಾಗಿದ್ದು, ಎರಡು ತಿಂಗಳಲ್ಲಿ ವರದಿ ಲಭ್ಯವಾಗುತ್ತಿದೆ. ಇಡೀ ದೇಶದಲ್ಲಿ ಉತ್ತಮ ವಿಧಿವಿಜ್ಞಾನ ಪ್ರಯೋಗಾಲಯವಿದೆ ಎಂದು ಜಿ.ಪರಮೇಶ್ವರ್ ಹೇಳಿದರು.
ಕಾರಾಗೃಹ ಕಮಾಂಡ್ ಸೆಂಟರ್:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರಾಗೃಹ ಅಧೀಕ್ಷಕರ ಹುದ್ದೆಗೆ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ ಚಟುವಟಿಕೆಯ ಮೇಲೆ ನಿಗಾವಹಿಸಲು ಕಮಾಂಡ್ ಸೆಂಟರ್ ಮಾಡಲಾಗುವುದು. ಕಾರಾಗೃಹಗಳಲ್ಲಿ ಜಾಮರ್ ಅಳವಡಿಕೆಯಿಂದ ಕಾರಾಗೃಹ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಜಿ.ಪರಮೇಶ್ವರ್ ಮಾಹಿತಿ ನೀಡಿದರು.
600 ಪಿಎಸ್ಸೈ ಹುದ್ದೆ ಖಾಲಿ:
ಹಿಂದಿನ ಸರಕಾರ ಅವಧಿಯಲ್ಲಿ 545 ಪಿಎಸ್ಸೈ ನೇಮಕಾತಿಯಲ್ಲಿನ ಅಕ್ರಮದಿಂದ ಪೊಲೀಸ್ ನೇಮಕಾತಿಗೆ ತೊಂದರೆ ಉಂಟಾಯಿತು. ಸಾವಿರಾರು ಹುದ್ದೆಗಳು ಖಾಲಿ ಉಳಿದಿದ್ದವು. ರೂಲ್ 32 ಅಡಿ ಬಡ್ತಿ ನೀಡಲಾಯಿತು. 545 ಪಿಎಸ್‍ಐ ನೇಮಕಾತಿಯಲ್ಲಿನ ಸಮಸ್ಯೆಯನ್ನು ಬಗೆಹರಿಸಿ ತರಬೇತಿಗೆ ಕಳುಹಿಸಲಾಗಿದೆ. 402 ಪಿಎಸ್‍ಐ ನೇಮಕಾತಿಯು ಪೂರ್ಣಗೊಂಡಿದ್ದು ತರಬೇತಿಗೆ ಕಳುಹಿಸಲಾಗುತ್ತಿದೆ. ಇನ್ನೂ 600 ಪಿಎಸ್ಸೈ ಹುದ್ದೆಗಳು ಖಾಲಿ ಇದ್ದು, ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿ.ಪರಮೇಶ್ವರ್ ಹೇಳಿದರು.
4500 ಪಿಸಿ ನೇಮಕಾತಿ: 4500 ಪೊಲೀಸ್ ಕಾನ್‍ಸ್ಟೇಬಲ್‍ಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಒಳಮೀಸಲಾತಿ ಪ್ರಕ್ರಿಯೆಯಿಂದ ಒಟ್ಟು 75 ಸಾವಿರ ಹುದ್ದೆಗಳ ಭರ್ತಿಗೆ ಸಾಧ್ಯವಾಗಿಲ್ಲ. ಇದು ಬಗೆಹರಿದರೆ, ಇಲಾಖೆಯಲ್ಲಿನ ಒಟ್ಟು 8 ಸಾವಿರ ನೇಮಕಾತಿಗೂ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿ.ಪರಮೇಶ್ವರ್ ಮಾಹಿತಿ ನೀಡಿದರು.
ವರ್ಗಾವಣೆ ದಂಧೆಗೆ ಕ್ರಮ: ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಚಾರ, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದರೆ ಅಮಾನತು ಅಥವಾ ಸೇವೆಯಿಂದ ವಜಾ ಮಾಡಲಾಗುತ್ತಿದೆ. ಭ್ರಷ್ಟಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದ, ಆತನನ್ನು ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಭ್ರಷ್ಟಚಾರವನ್ನು ಸಹಿಸುವುದಿಲ್ಲ. ವರ್ಗಾವಣೆ ದಂಧೆಯಲ್ಲಿ ತೊಡಗುವ ಏಜೆಂಟ್‍ಗಳ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಜಿ.ಪರಮೇಶ್ವರ್ ಎಚ್ಚರಿಸಿದರು.
ಡ್ರಗ್ಸ್ ವಿಚಾರದಲ್ಲಿ ರಾಜಿ ಇಲ್ಲ: ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯನ್ನು(ಎಎನ್‍ಟಿಎಫ್) ಸ್ಥಾಪಿಸಲಾಗಿದ್ದು, ಈಗಾಗಲೇ ಕಾರ್ಯಾರಂಭಿಸಿದೆ. ಬೆಂಗಳೂರು ನಗರದಲ್ಲಿ ಹಿಂದಿನ 11 ತಿಂಗಳಲ್ಲಿ 160 ಕೋಟಿ ರೂ. ಮೌಲ್ಯದ 1407 ಕೆ.ಜಿ. ವಿವಿಧ ರೂಪದ ಮಾದಕ ದ್ರವ್ಯ ಪತ್ತೆಹಚ್ಚಲಾಗಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ 300ಕ್ಕು ಹೆಚ್ಚು ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ. 2024ರಲ್ಲಿ 98 ಕೋಟಿ, 2023ರಲ್ಲಿ 103 ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಲಾಗಿದೆ. ಇದು ಪೊಲೀಸ್ ಇಲಾಖೆಯ ದೊಡ್ಡ ಸಾಧನೆ. ಬೆಂಗಳೂರು ನಗರದಲ್ಲಿ ಪೊಲೀಸರು ಶಾಲಾ ಕಾಲೇಜುಗಳಿಗೆ ಭೇಟಿ ಕೊಟ್ಟು, ಡ್ರಗ್ಸ್ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಿದ್ದಾರೆ. ಇದು ನಿರಂತರವಾಗಿ ನಡೆಯಲಿದೆ. ರಾಜ್ಯದಲ್ಲಿ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವ ವಿಚಾರದಲ್ಲಿ ಯಾವುದೇ ರೀತಿಯ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪರಮೇಶ್ವರ್ ವಿವರಿಸಿದರು.







